ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಯಾವ ಹಣ್ಣನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಅನ್ನೋದು ಬಹಳ ಮುಖ್ಯ. ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಸೂಕ್ತ. ಇನ್ನು ಕೆಲವನ್ನು ಊಟದ ನಂತರವೇ ಸೇವನೆ ಮಾಡಬೇಕು.
ಇನ್ನು ಪಪ್ಪಾಯ ಹಣ್ಣಂತೂ ಹೊಟ್ಟೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಮಸ್ಯೆಗಳನ್ನೂ ನಿವಾರಣೆ ಮಾಡುತ್ತದೆ. ಆದರೂ ಕೆಲವರು ಪಪ್ಪಾಯ ಹಣ್ಣನ್ನು ಸೇವನೆ ಮಾಡುವಂತಿಲ್ಲ. ಗರ್ಭಿಣಿಯರು ಪಪ್ಪಾಯ ತಿನ್ನಬಾರದು ಎಂಬ ನಂಬಿಕೆ ಮೊದಲಿನಿಂದಲೂ ಇದೆ.
ಮತ್ತೊಂದೆಡೆ ಸಾಮಾನ್ಯ ಜನರು ಕೂಡ ಪ್ಪಪ್ಪಾಯ ಸೇವನೆ ಬಗ್ಗೆ ಭಿನ್ನ ಆಲೋಚನೆ ಹೊಂದಿದ್ದಾರೆ. ಕೆಲವರು ಊಟದ ನಂತರ ಇದನ್ನು ತಿನ್ನುವುದು ಸೂಕ್ತ ಎಂದುಕೊಂಡ್ರೆ ಇನ್ನು ಕೆಲವರು ಊಟಕ್ಕೂ ಮೊದಲೇ ತಿನ್ನಬೇಕು ಎಂದುಕೊಂಡಿರ್ತಾರೆ.
ಪಪಾಯಿನ್ ಕಿಣ್ವವು ಪಪ್ಪಾಯ ಹಣ್ಣಿನಲ್ಲಿ ಕಂಡುಬರುತ್ತದೆ.ಇದು ಪ್ರೋಟೀನ್‌ಗಳ ವಿಭಜನೆಗೆ ಬಹಳ ಮುಖ್ಯವಾಗಿದೆ. ಪಪ್ಪಾಯ ಹಣ್ಣನ್ನು ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟವಾಗಿ ಒಂದು ಗಂಟೆಯ ನಂತರ ತಿನ್ನಬಹುದು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಪಪ್ಪಾಯ ಸೇವನೆಯಿಂದ ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್ ಉತ್ಪತ್ತಿಯಾಗುವುದಿಲ್ಲ. ಇದು ಅಜೀರ್ಣಕ್ಕೆ ಕೂಡ ಮದ್ದಿನಂತೆ ಕೆಲಸ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಪಪ್ಪಾಯ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಇದು ಪ್ರಯೋಜನಕಾರಿ. ಮುಟ್ಟಿನ ಸಮಯದಲ್ಲಿ ಪಪ್ಪಾಯ ಹಣ್ಣನ್ನು ತಿಂದರೆ ನೋವು ಕಡಿಮೆಯಾಗುತ್ತದೆ. ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಹೊಟ್ಟೆ ಶುದ್ಧವಾಗುತ್ತದೆ.