ಆಸ್ಟ್ರೇಲಿಯಾ: ಇಲ್ಲಿಯ ಹೋಲ್‌ಸ್ಟೈನ್-ಫ್ರೀಸಿಯನ್ ತಳಿಯ ಹಸುವೊಂದು ಕರುವಿಗೆ ಜನ್ಮ ನೀಡಿದ್ದು, ಅದಕ್ಕೆ ಜನರು ಪ್ರೀತಿಯಿಂದ “ಹ್ಯಾಪಿ” ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣವೂ ಕುತೂಹಲವಾಗಿದೆ.
ಎಬಿಸಿ ನ್ಯೂಸ್ ಪ್ರಕಾರ, “ಹ್ಯಾಪಿ” ಈ ವಾರದ ಆರಂಭದಲ್ಲಿ ವೆಸ್ಟ್ ಗಿಪ್ಸ್‌ಲ್ಯಾಂಡ್‌ನ ರಿಪಲ್‌ಬ್ರೂಕ್‌ನಲ್ಲಿರುವ ಸ್ಟಡ್ ಫಾರ್ಮ್‌ನಲ್ಲಿ ಜನಿಸಿದೆ. ವರ್ಷಕ್ಕೆ ಸುಮಾರು 700 ಕರುಗಳನ್ನು ಸಾಕುವ ಮೇಗನ್ ಮತ್ತು ಬ್ಯಾರಿ ಕೋಸ್ಟರ್ ಈ ಜಮೀನಿನ ಮಾಲೀಕರು.
ನಾವು ತಲೆಯ ಮೇಲೆ ಹೃದಯ ಹಾಗೂ ಬಗೆಬಗೆ ಗುರುತು ಇರುವ ಹಸುಗಳನ್ನು ನೋಡಿರುತ್ತೇವೆ. ಆದರೆ ಈ ಕರುವಿಗೆ ಹ್ಯಾಪಿ ಎಂದು ಜನರು ಕರೆಯಲು ಕಾರಣ, ಇದರ ಹೊಟ್ಟೆ ಮೇಲೆ ಎರಡು ಕಣ್ಣು, ಮೂಗಿನ ರೀತಿಯ ಗುರುತು ಇದ್ದು, ಕೆಳಗೆ ನಗುತ್ತಿರುವ ಬಾಯಿಯ ಚಿತ್ರವಿದೆ. ಜನಿಸಿದಾಗಲೇ ಇಷ್ಟು ಸುಂದರ ರೂಪವನ್ನು ಇದು ಪಡೆದಿದೆ. ಈ ಕುತೂಹಲದ ಕರುವನ್ನು ನೋಡಲು ವಾರಾಂತ್ಯದಲ್ಲಿ ಸಹಸ್ರಾರು ಜನರು ಆಗಮಿಸುತ್ತಿದ್ದಾರೆ.