ಸುಮಾರು ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕ್ಯಾಬ್ ಚಾಲಕ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯು ಜಾರ್ಖಂಡ್ನ ಸೆರೈಕೆಲಾ – ಖಾರ್ಸಾವಾನ್ ಎಂಬಲ್ಲಿ ನಡೆದಿದೆ.
22 ವರ್ಷದ ರಾಹುಲ್ ಶ್ರೀವಾತ್ಸವ್ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಎಂಜಿಎಂ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಇದಾದ ಬಳಿಕ ಅಕ್ಟೋಬರ್ 3ರಂದು ಅಪಹರಣ ಪ್ರಕರಣವನ್ನೂ ದಾಖಲಿಸಲಾಗಿತ್ತು.
ಈ ಪ್ರಕರಣ ಸಂಬಂಧ 22 ವರ್ಷದ ಶಂಕಿತ ಸುಧೀರ್ ಕುಮಾರ್ ಶರ್ಮಾ ಹಾಗೂ ಆತನ ಸಹಚರ ರವೀಂದ್ರ ಮಹಾತೋನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ತನಿಖೆಯ ವೇಳೆ ರಾಹುಲ್ ಮೊಬೈಲ್ ಫೋನ್ ಸುಧೀರ್ ಶರ್ಮಾ ಬಳಿ ಇರುವ ವಿಚಾರ ಬೆಳಕಿಗೆ ಬಂದಿದೆ.
ತನಿಖೆ ಚುರುಕುಗೊಳಿಸುತ್ತಿದ್ದಂತೆಯೇ ಇಬ್ಬರೂ ರಾಹುಲ್ ಶ್ರೀವಾತ್ಸವ್ನನ್ನು ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಆ್ಯಪ್ ಒಂದರಲ್ಲಿ ಕಾರು ಚಾಲಕನಾಗಿದ್ದ ರಾಹುಲ್ಗೆ ಸೇರಿದ್ದ ಕಾರನ್ನು ಮಾರುವ ಉದ್ದೇಶದಿಂದ ಆತನನ್ನು ಕೊಲೆ ಮಾಡಿದ್ದಾಗಿ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.
ರಾಹುಲ್ನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ಅರಣ್ಯದಲ್ಲಿ ಬಿಸಾಡಿ ಕಾರು ಹಾಗೂ ರಾಹುಲ್ಗೆ ಸೇರಿದ ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದರು. ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಕಾಡಿನಲ್ಲಿ ರಾಹುಲ್ ಅಸ್ತಿಪಂಜರವನ್ನು ಪತ್ತೆ ಮಾಡಿದ್ದಾರೆ. ರಾಹುಲ್ ಕಾರನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.