ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬರನ್ನು ಆಕೆಯ ಪತಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಕೇರಳದಲ್ಲಿ ಜರುಗಿದೆ.
ಆಪಾದಿತನು 31 ವರ್ಷ ವಯಸ್ಸಿನ ತನ್ನ ಮಡದಿಯನ್ನು ವರದಕ್ಷಿಣೆ ವಿಚಾರವಾಗಿ ಚಿತ್ರಹಿಂಸೆ ಕೊಟ್ಟಿದ್ದು, ತನ್ನ ಮದುವೆ ಸಂದರ್ಭದಲ್ಲಿ ಮಾಡಿಸಿದ್ದ ಚಿನ್ನವನ್ನು ಮಾರಲು ಒಪ್ಪದ ಕಾರಣ ಆಕೆ ಹಸಿವಿನಿಂದ ನರಳುವಂತೆ ಮಾಡಿ, ಆಕೆ ಕಾಲಿನ ಮೂಳೆ ಮುರಿದಿದ್ದಾನೆ.
ಪ್ರಕರಣ ಸಂಬಂಧ ದೂರು ಕೊಟ್ಟರೂ ಪೊಲೀಸರು ಕ್ರಮ ತೆಗೆದುಕೊಳ್ಳಲು ನಿಧಾನ ಮಾಡಿದ ಕಾರಣ ಮಾಧ್ಯಮಗಳ ಮುಂದೆ ಬಂದಿರುವುದಾಗಿ ತಿಳಿಸಿದ ಈಕೆ ತನ್ನ ಪಾಡನ್ನು ಹೇಳಿಕೊಂಡಿದ್ದಾರೆ.
ಎದೆ ನಡುಗಿಸುವಂತಿದೆ ಭೂಕುಸಿತದ ದೃಶ್ಯ
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಈ ಮಹಿಳೆ ತನ್ನದೇ ವಯಸ್ಸಿನ ಟೆಕ್ಕಿಯೊಬ್ಬರನ್ನು ಮದುವೆ ಮಾಡಿಕೊಂಡಿದ್ದಾರೆ. ತಿರುವನಂತಪುರಂನ ಟೆಕ್ನೋಪಾರ್ಕ್‌ನಲ್ಲಿ ಕೆಲಸ ಮಾಡುವ ಈ ಟೆಕ್ಕಿಯನ್ನು ಸಂತ್ರಸ್ತ ಮಹಿಳೆ ಇದೇ ವರ್ಷದ ಏಪ್ರಿಲ್‌ನಲ್ಲಿ ಕೈ ಹಿಡಿದಿದ್ದಾರೆ. ಮದುವೆಯಾದ ಕೆಲವೇ ದಿನಗಳ ಬಳಿಕ ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಲು ಮುಂದಾದ ಈ ಟೆಕ್ಕಿ, ವರದಕ್ಷಿಣೆ ಹಾಗೂ ಚಿನ್ನದ ವಿಚಾರವಾಗಿ ಆಕೆ ಜೀವ ಹಿಂಡಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
“ಆತ ಈ ಹಿಂದೆ ಮತ್ತೊಂದು ಮದುವೆಯಾಗಿದ್ದು, ಆತನ ಕಿರುಕುಳದಿಂದ ಆತನ ಮಾಜಿ ಪತ್ನಿ ಬಿಟ್ಟು ಹೋಗಿದ್ದಾಳೆ. ಆದರೆ ನಮಗೆ ಈ ವಿಷಯ ತಿಳಿದು ಬಂದಿಲ್ಲ. ಬಹುಶಃ ಆತ ಮತ್ತೊಂದು ಮದುವೆಯಾಗಬಹುದು. ನನಗೆ ಆದ ನೋವು ಬೇರೊಬ್ಬರಿಗೆ ಬರುವುದು ನನಗೆ ಇಷ್ಟವಿಲ್ಲ” ಎಂದು ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ.