ಅಕ್ಕ – ತಮ್ಮನಿಗೆ ಗೂಡ್ಸ್ ರೈಲು ಬಡಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಎಥ್ವಾ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತ ಯುವತಿಯನ್ನು 17 ವರ್ಷದ ಅಂಜು ಹಾಗೂ ಈಕೆಯ ಮೃತ ತಮ್ಮನನ್ನು 15 ವರ್ಷದ ನಿತೇಶ್ ಎಂದು ಗುರುತಿಸಲಾಗಿದೆ.
ಎಥ್ವಾ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಕಾನ್ಪುರದ ಕಡೆಗೆ ಹೊರಟಿದ್ದ ಗೂಡ್ಸ್ ರೈಲು ಬೆಳಗ್ಗೆ 6 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದೆ. ಅಪ್ರಾಪ್ತರಿಬ್ಬರು ಹೊಲಕ್ಕೆ ಕೆಲಸಕ್ಕಾಗಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇಬ್ಬರ ಶವಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು ಮರಣೋತ್ತರ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಶವಗಳನ್ನು ಕಳುಹಿಸಿಕೊಟ್ಟಿದ್ದಾರೆ. ಪೊಲೀಸ್ ತನಿಖೆಯ ವೇಳೆ ಅಂಜು ಮೊದಲ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಳು ಹಾಗೂ ನಿತೇಶ್ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಕೃಷಿ ಭೂಮಿಯನ್ನೇ ನಂಬಿಕೊಂಡು ಈ ಕುಟುಂಬದ ಜೀವನ ಸಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ರೈಲು ಬರುತ್ತಿದ್ದ ಬಗ್ಗೆ ಅಂದಾಜಿಲ್ಲದ ಅಂಜುಗೆ ನಿತೇಶ್ ಅಲರ್ಟ್ ಮಾಡಲು ಯತ್ನಿಸಿದ್ದಾನೆ. ಆದರೆ ಇದನ್ನು ಅಂಜು ಕೇಳಿಸಿಕೊಂಡಿರಲಿಲ್ಲ. ಅಪಾಯದಿಂದ ಅಂಜುವನ್ನು ಎಳೆಯಲು ಯತ್ನಿಸಿದ ವೇಳೆ ಇಬ್ಬರಿಗೂ ರೈಲು ಬಡಿದಿದೆ. ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಇಬ್ಬರನ್ನೂ ಪ್ರಾಣಾಪಾಯದಿಂದ ಪಾರು ಮಾಡಲು ಸ್ಥಳೀಯರು ಯತ್ನಿಸಿದ್ದಾರೆ. ಆದರೆ ರೈಲು ಬಡಿದ ಕೆಲವೇ ಕ್ಷಣಗಳಲ್ಲಿ ಅಪ್ರಾಪ್ತರಿಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.