ಕೋಲ್ಕತಾ: ಕೆಲವೊಮ್ಮೆ ನಂಬಲಸಾಧ್ಯ ಎನ್ನಿಸುವ ಘಟನೆಗಳು ನಡೆಯುವುದುಂಟು. ಅದರಲ್ಲಿ ಒಂದು ಈ ಘಟನೆ. ತಂಗಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಣ್ಣನೊಬ್ಬ ಬರೋಬ್ಬರಿ 26 ವರ್ಷಗಳಿಂದ ತನ್ನ ನಾಲಿಗೆಯ ಮೇಲೆ ಆಲಿವ್ ಬೀಜವನ್ನು ಇಟ್ಟುಕೊಂಡೇ ಇದ್ದಾನೆ !
ಊಟ ಮಾಡುವಾಗ, ಹಲ್ಲುಜ್ಜುವಾಗ…… ಹೀಗೆ ಬಾಯಿಯಿಂದ ಏನೇ ಕಾರ್ಯ ಮಾಡಿದರೂ ಈ ಆಲೀವ್ ಬೀಜ ಮಾತ್ರ ಬಾಯಿಯಲ್ಲಿಯೇ ಇರುತ್ತದೆಯಂತೆ!
ಇಂಥದ್ದೊಂದು ಸಾಹಸ ಮಾಡುತ್ತಿರುವ ವ್ಯಕ್ತಿ ಪಶ್ಚಿಮ ಬಂಗಾಳದ ಅಶೋಕನಗರ ಕಚುವಾ ಮೋರ್ ಪ್ರದೇಶದ ನಿವಾಸಿ ಜೈದೇವ್ ಬಿಸ್ವಾಸ್.
1996ರಲ್ಲಿ, ಒಮ್ಮೆ ಊಟ ಮಾಡುತ್ತಿದ್ದ ಸಮಯದಲ್ಲಿ ಅಲೀವ್ನಿಂದ ಚಟ್ನಿ ಮಾಡಲಾಗಿತ್ತು. ಈ ಸಮಯದಲ್ಲಿ ತಂಗಿ ಸಹಜವಾಗಿ ಅಣ್ಣನಿಗೆ ಆಲೀವ್ ಬೀಜವನ್ನು ಬಾಯಿಯಲ್ಲಿ ಎಷ್ಟು ದಿನಗಳವರೆಗೆ ಇಟ್ಟುಕೊಳ್ಳಬಹುದು ಎಂದು ಕೇಳಿದ್ದಾಳೆ.
ಆಗ ಈ ಅಣ್ಣ, ಅದು ಉಗಿಯಬೇಕು ಎನ್ನಿಸುವವರೆಗೆ ಎಷ್ಟು ವರ್ಷವಾದರೂ ಇಟ್ಟುಕೊಳ್ಳಬಹುದು ಎಂದಿದ್ದಾನೆ. ಇದನ್ನೇ ತಂಗಿ ಚಾಲೆಂಜ್ ಮಾಡಿ ಹಾಗಿದ್ದರೆ ನೀನು ನನಗಾಗಿ ಇದನ್ನು ವರ್ಷಗಟ್ಟಲೆ ಬಾಯಲ್ಲಿ ಇಟ್ಟುಕೊಳ್ಳಬೇಕು ಎಂದಿದ್ದಾಳೆ.
ಈ ಮಾತನ್ನೇ ಚಾಲೆಂಜ್ ಆಗಿ ಸ್ವೀಕರಿಸಿರುವ ಜೈದೇವ್ ಬಿಸ್ವಾಸ್ ಇಂದಿಗೂ ನಾಲಿಗೆ ಮೇಲೆ ಅದನ್ನು ಇಟ್ಟುಕೊಳ್ಳುತ್ತಿದ್ದಾರೆ. 10 ವರ್ಷಗಳ ಹಿಂದೆ ಇವರ ಸಹೋದರಿ ನಿಧನರಾದರೂ 68 ವರ್ಷದ ಜೈದೇವ್ ಬಿಸ್ವಾಸ್ ಮಾತ್ರ ತಂಗಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದಾರೆ. ಇದು ನನಗೆ ತಂಗಿಯ ಮೇಲಿರುವ ಪ್ರೀತಿ ಎಂದಿದ್ದಾರೆ.