ಪ್ಲಾಜೋ ಪ್ಯಾಂಟ್‌ಗಳು ಎಂದರೆ ಹಲವರಿಗೆ ಅರ್ಥವಾಗಲಿಕ್ಕಿಲ್ಲ. ಇದನ್ನು ಸರಳೀಕರಿಸಿ ಹೇಳುವುದಾದರೆ ವೈಡ್ ಪ್ಯಾಂಟ್‌ಗಳು ಇದರ ಅರ್ಥ ಆಡು ಭಾಷೆಯಲ್ಲಿ ಹೇಳುವುದಾದರೆ ದೊಗಲೆ ಪ್ಯಾಂಟ್‌ಗಳು ಎಂದು.
ಅಸಲಿಗೆ ಇದು ಪ್ಯಾಂಟ್ ಅಲ್ಲ, ಬದಲಿಗೆ ಅಗಲವಾಗಿರುವ ಚಡ್ಡಿಗಳು ಎಂದು ಹೇಳಬಹುದು. ಈಗ ಇಂಥದ್ದೇ ಪ್ಯಾಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣ, ಇದನ್ನು ತಯಾರು ಮಾಡಿರುವುದು ಗೋಣಿಚೀಲದಿಂದ !
ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೇಗೆಲ್ಲಾ ಬದಲಾವಣೆ ಆಗುತ್ತಿದೆ. ಕೆಲವೊಂದು ಫ್ಯಾಷನ್ಗಳನ್ನು ಊಹಿಸುವುದೂ ಕಷ್ಟವಾಗಿದೆ. ಬೇಡ ಎಂದು ಬಿಸಾಕುವ, ಮೂಲೆಗುಂಪು ಮಾಡುವ ಸಾಮಗ್ರಿಗಳೇ ಈಗ ಫ್ಯಾಷನ್ ಲೋಕವನ್ನು ಆವರಿಸುತ್ತಿದೆ. ಅದರಲ್ಲಿ ಒಂದು ಗೋಣಿಚೀಲ.
ಹಲವಾರು ಫ್ಯಾಷನ್ ಷೋಗಳಲ್ಲಿ ರೂಪದರ್ಶಿಯರು ಗೋಣಿಚೀಲದ ಉಡುಪುಗಳನ್ನು ತೊಟ್ಟು ಕ್ಯಾಟ್ವಾಕ್ ಮಾಡುವುದನ್ನು ಕಾಣಬಹುದು. ಅದರಂತೆಯೇ ಈಗ ವೈರಲ್ ಆಗುತ್ತಿರುವ ದೊಗಲೆ ಪ್ಯಾಂಟ್ ಕೂಡ.
ಆದರೆ ಇದು ಇಷ್ಟೊಂದು ಸುದ್ದಿ ಮಾಡಲು ಕಾರಣ, ಇದರ ಬೆಲೆ. ವಿಡಿಯೋವನ್ನು ನೀವು ನೋಡಿದರೆ ಈ ಪ್ಯಾಂಟ್ ಬೆಲೆ ಕೇಳಿ ಹೌಹಾರುವುದು ಗ್ಯಾರಂಟಿ. ಏಕೆಂದರೆ, ಇದರ ಬೆಲೆ 60 ಸಾವಿರ ರೂಪಾಯಿಗಳು ! ನೈಸರ್ಗಿಕವಾಗಿ ಇರುವ ಸೆಣಬಿನಿಂದ ಇದು ಮಾಡಿರುವ ಕಾರಣ, ಧರಿಸಲು ಕೂಡ ಸಾಫ್ಟ್ ಸಾಫ್ಟ್ ಆಗಿರುತ್ತದೆ. ಚರ್ಮಕ್ಕೂ ಯಾವುದೇ ತೊಂದರೆ ಇಲ್ಲ ಎಂದು ಈ ಪರಿಯ ಬೆಲೆ ಇಟ್ಟಿರುವುದಾಗಿ ಕಂಪೆನಿ ಹೇಳಿಕೊಂಡಿದೆ. ಇನ್ನೂ ಈ ಕಣ್ಣಿನಿಂದ ಏನೇನು ನೋಡಬೇಕೋ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.