ಮುಂಬೈ: ಜಾವೇದ್ ಅಖ್ತರ್ ಅವಮಾನ ಪ್ರಕರಣದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಮನವಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
2020ರಲ್ಲಿ ಗೀತರಚನೆಕಾರ ಜಾವೇದ್ ಅಖ್ತರ್, ಕಂಗನಾ ರಣಾವತ್ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ನಟಿ ಕಂಗನಾ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಬೆಚ್ಚಿಬೀಳಿಸುವಂತಿದೆ ತಾಲಿಬಾನಿಗಳು ಪತ್ರಕರ್ತರಿಗೆ ನೀಡಿದ ಶಿಕ್ಷೆ
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದೂರದರ್ಶನದಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅಖ್ತರ್ ಕೋರ್ಟ್ ಮೆಟ್ಟಿಲೇರಿದ್ದರು. ಅಂಧೇರಿಯಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಫೆಬ್ರವರಿಯಲ್ಲಿ ರಣಾವತ್ ವಿರುದ್ಧ ವಿಚಾರಣೆಯನ್ನು ಆರಂಭಿಸಿತು. ಹಾಗೂ ಮಾರ್ಚ್ ನಲ್ಲಿ ಜಾಮೀನು ಸಹಿತ ವಾರೆಂಟ್ ಹೊರಡಿಸಿತು. ಜಾಮೀನಿಗಾಗಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಕಂಗನಾಗೆ, ನ್ಯಾಯಾಲಯವು ಜಾಮೀನು ನೀಡಿ ಆದೇಶ ಹೊರಡಿಸಿತ್ತು.
ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ಕಂಗನಾ, ತನ್ನ ಮೇಲಿರುವ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಆದರೀಗ ಮಹತ್ವದ ತೀರ್ಪು ಪ್ರಕಟಿಸಿರುವ ನ್ಯಾಯಾಲಯವು ಕಂಗನಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.