ದೆಹಲಿ ಬಾರ್ ಅಸೋಸಿಯೇಷನ್ ಸಿಬ್ಬಂದಿಯ ಮೃತದೇಹ ತೀಸ್ ಹಜಾರಿ ನ್ಯಾಯಾಲಯದ ಕೊಠಡಿಯೊಳಗೆ ಪತ್ತೆಯಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ವ್ಯಕ್ತಿಯು ದೆಹಲಿ ಬಾರ್ ಅಸೋಸಿಯೇಷನ್ನ ತಾತ್ಕಾಲಿಕ ಸಿಬ್ಬಂದಿಯಾಗಿದ್ದನು ಎಂದು ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಮಾಹಿತಿ ನೀಡಿದ್ರು.
ಮೃತ ವ್ಯಕ್ತಿಯು ಕ್ಷಯ ರೋಗಿಯಾಗಿದ್ದು ಅತಿಯಾಗಿ ಮದ್ಯಪಾನ ಕೂಡ ಮಾಡುತ್ತಿದ್ದನು. ನ್ಯಾಯಾಲಯದ ಸಂಕೀರ್ಣದ ಪಶ್ಚಿಮ ಭಾಗದಲ್ಲಿರುವ ಚೇಂಬರ್ನಲ್ಲಿರುವ ಕಸದ ಬುಟ್ಟಿಯಲ್ಲಿ ರಕ್ತ ಮಿಶ್ರಿತ ವಾಂತಿ ಕಂಡು ಬಂದಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಮೃತದೇಹದ ಮೇಲೆ ಯಾವುದೇ ಗಾಯದ ಕಲೆಗಳು ಪತ್ತೆಯಾಗಿಲ್ಲ. ಆದರೂ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.