ಕರ್ನಾಟಕದಂತೆಯೇ ಇದೀಗ ಆಂಧ್ರ ಪ್ರದೇಶದಲ್ಲೂ ಟಿಪ್ಪು ಸುಲ್ತಾನ್ ವಿವಾದ ಆರಂಭವಾಗಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದಡ್ಡೂರು ಎಂಬಲ್ಲಿ ಆಂಧ್ರ ಸರ್ಕಾರ ಪ್ರತಿಮೆ ಆರಂಭಕ್ಕೆ ಮುಂದಡಿ ಇಟ್ಟಿದ್ದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರೊದಡ್ಡೂರು ಭಾಗದ ಮುಸ್ಲಿಂ ಸಮುದಾಯದ ಬೇಡಿಕೆಯನ್ನ ಈಡೇರಿಸುವ ಸಲುವಾಗಿ ವೈಎಸ್ಆರ್ಪಿ ಶಾಸಕ ರಾಚಮಲ್ಲು ಶಿವ ಪ್ರಸಾದ್ ರೆಡ್ಡಿ, ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ. ಆದರೆ ಇದಕ್ಕೆಸ್ಥಳೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಂದೂ ಪೀಡಕನಾದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿದಲ್ಲಿ ಅದನ್ನ ಧ್ವಂಸ ಮಾಡುತ್ತೇವೆ ಎಂದು ಆಂಧ್ರ ಪ್ರದೇಶ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಜಿನ್ನಾರೋಡ್ ಸರ್ಕಲ್ನಲ್ಲಿ ಪ್ರತಿಭಟನೆಗೆ ಮುಂದಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಸೇರಿದಂತೆ ಹಲವರನ್ನ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿರುವ ವೈಎಸ್ಆರ್ಪಿ ಮುಸ್ಲಿಮರ ಮತವನ್ನ ಸೆಳೆಯುವ ಸಲುವಾಗಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುತ್ತಿದೆ ಎಂದು ವಿಷ್ಣುವರ್ಧನ್ ಆರೋಪಿಸಿದ್ದಾರೆ.
18ನೇ ಶತಮಾನದಲ್ಲಿ ಮೈಸೂರನ್ನ ಆಳಿದ್ದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಜಯಂತಿ ವಿಚಾರವಾಗಿ ಕರ್ನಾಟಕದಲ್ಲಿ ಶುರುವಾದ ವಿವಾದ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಈ ನಡುವೆ ಇದೀಗ ಆಂಧ್ರದಲ್ಲೂ ಈ ಹೊಸ ವಿವಾದ ಶುರುವಾದಂತಾಗಿದೆ.