alex Certify ಕುಟುಂಬ ರಾಜಕಾರಣ, ಅನುಕಂಪದಲ್ಲೂ ಬಿಜೆಪಿ ತಾರತಮ್ಯ…? ಚರ್ಚೆಗೆ ಕಾರಣವಾಯ್ತು ವರಿಷ್ಠರ ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬ ರಾಜಕಾರಣ, ಅನುಕಂಪದಲ್ಲೂ ಬಿಜೆಪಿ ತಾರತಮ್ಯ…? ಚರ್ಚೆಗೆ ಕಾರಣವಾಯ್ತು ವರಿಷ್ಠರ ನಡೆ

ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಕೇಂದ್ರದ ಮಾಜಿ ಸಚಿವ ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿಯವರಿಗೆ ಟಿಕೆಟ್ ನೀಡಲಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ದಿ. ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಗೆ ಟಿಕೆಟ್ ನೀಡುವಾಗ ಕುಟುಂಬ ರಾಜಕಾರಣದ ನೆಪ ಹೇಳಿದ್ದ ಬಿಜೆಪಿ ನಾಯಕರು ಈಗ ಅನುಕಂಪದ ಅಲೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

ಅಂದ ಹಾಗೆ ಅನಂತ್ ಕುಮಾರ್ ರಾಜ್ಯದಲ್ಲಿ ಮಾತ್ರವಲ್ಲದೆ ಕೇಂದ್ರ ರಾಜಕೀಯದಲ್ಲಿಯೂ ತಮ್ಮದೇ ಪ್ರಭಾವ ಹೊಂದಿದ್ದರು. ತೇಜಸ್ವಿನಿ ಅನಂತಕುಮಾರ್ ಪತಿಯ ಪರವಾಗಿ ಅನೇಕ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಸೇವಾ ಕಾರ್ಯಗಳ ಮೂಲಕ ಅವರು ಜನಾನುರಾಗಿ ಆಗಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಲಾಗುವುದು ಎಂದೇ ಬಿಂಬಿಸಲಾಗಿತ್ತು. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಒಮ್ಮತದಿಂದ ನಿರ್ಣಯ ಕೈಗೊಂಡು ಅವರ ಹೆಸರನ್ನು ಕೇಂದ್ರಕ್ಕೆ ಕಳುಹಿಸಿದ್ದರು.

ಆದರೆ ಕುಟುಂಬ ರಾಜಕಾರಣ ನೆಪದಲ್ಲಿ ನಾಯಕರು ಹೊಸಮುಖ ಪರಿಚಯಿಸುವ ಕಾರಣ ಹೇಳಿ ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಿದ್ದರು. ಕುಟುಂಬ ರಾಜಕಾರಣದ ನೆಪದಲ್ಲಿ ತೇಜಸ್ವಿನಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈಗ ಅದೇ ಬಿಜೆಪಿ ವರಿಷ್ಠರು ಮಂಗಳಾ ಅಂಗಡಿ ಅವರಿಗೆ ಟಿಕೆಟ್ ಘೋಷಿಸಿದ್ದಾರೆ. ಅನುಕಂಪ, ಕುಟುಂಬ ರಾಜಕಾರಣದ ವಿಚಾರದಲ್ಲಿ ಬಿಜೆಪಿ ವಿಭಿನ್ನ ನಿಲುವು ತಳೆದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಆರಂಭದಲ್ಲಿ ಅಂಗಡಿಯವರ ಕುಟುಂಬಕ್ಕೆ ಟಿಕೆಟ್ ನೀಡುವ ಚರ್ಚೆ ನಡೆದಾಗ ಸುರೇಶ್ ಅಂಗಡಿ ಅವರ ಪುತ್ರಿ ಮತ್ತು ಸಚಿವ ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಅವರನ್ನು ಕಣಕ್ಕಿಳಿಸುವ ಚರ್ಚೆ ನಡೆದಿತ್ತು. ಅವರೊಂದಿಗೆ ಅನೇಕ ಆಕಾಂಕ್ಷಿಗಳು ಕೂಡ ಇದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮಂಗಳಾ ಅಂಗಡಿಯವರಿಗೆ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿ ವರಿಷ್ಠರು ಅನುಕಂಪದಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...