ವೈದ್ಯರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಗುಜರಾತ್‌ನ ಜುನಾಘಡದ ಸಂಸದ ರಾಜೇಶ್ ಚುದಾಸ್ಮಾ ಹಾಗೂ ಅವರ ತಂದೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತಮ್ಮ ಬಳಿ 1.75 ಕೋಟಿ ರೂ ಸಾಲ ಪಡೆದಿದ್ದ ಸಂಸದ ಹಾಗೂ ಆತನ ತಂದೆ ಆ ದುಡ್ಡನ್ನು ಮರಳಿ ನೀಡುವಂತೆ ಕೇಳಿದಾಗ ತಮಗೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ, ಪತ್ರ ಬರೆದು, ಡಾ. ಅತುಲ್ ಚಾಗ್ ಫೆಬ್ರವರಿ 12ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೆ ಪ್ರೇರಣೆ ಹಾಗೂ ಬೆದರಿಕೆಯೊಡ್ಡಿದ ಆರೋಪದ ಮೇಲೆ ಐಪಿಸಿಯ ಸಂಬಂಧಪಟ್ಟ ವಿಧಿಗಳಡಿ ಅಪ್ಪ-ಮಗನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಇಬ್ಬರನ್ನೂ ಇದುವರೆಗೆ ಬಂಧಿಸಿಲ್ಲ.
ಇಲ್ಲಿನ ವೆರಾವಲ್ ಪ್ರದೇಶದಲ್ಲಿ ವೈದ್ಯರಾಗೆ ಹೆಸರು ಮಾಡಿದ್ದ ಚಾಗ್ ಬರೆದಿದ್ದ ಆತ್ಮಹತ್ಯಾ ಪತ್ರವನ್ನು ಪೊಲೀಸರು ಮೊದಲಿಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದರು. ಆದರೆ ಚಾಗ್ ಪುತ್ರ ಹಿತಾರ್ಥ್ ಈ ಸಂಬಂಧ ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಪೊಲೀಸರ ವಿರುದ್ಧ ದೂರು ಕೊಟ್ಟಿದ್ದರು. ಆದರೆ ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ತಮ್ಮೊಂದಿಗೆ 20 ವರ್ಷಗಳಿಂದ ಒಡನಾಟ ಹೊಂದಿದ್ದ ವೈದ್ಯ ಚಾಗ್‌ರಿಂದ ಚುದಾಸ್ಮಾ 2008ರಿಂದ ಹಂತಹಂತವಾಗಿ 1.75 ಕೋಟಿ ರೂಗಳನ್ನು ಸಾಲದ ರೂಪದಲ್ಲಿ ಪಡೆದಿದ್ದಾರೆ ಎನ್ನಲಾಗಿದೆ. ಈ ದುಡ್ಡಿನಲ್ಲಿ ಒಂದು ಭಾಗವನ್ನಷ್ಟೇ ಮರು ಪಾವತಿ ಮಾಡಿದ ಚುದಾಸ್ಮಾ, ಬಳಿಕ ಮಿಕ್ಕ ಹಣವನ್ನು ಕೇಳಿದಾಗ ಕೊಡಲು ನಿರಾಕರಿಸಿದ್ದಾರೆ.
ಇದರ ಬೆನ್ನಿಗೇ ಸಂಸದ ಹಾಗೂ ಆತನ ತಂದೆ ಡಾ ಚಾಗ್ ಹಾಗೂ ಅವರ ಪುತ್ರನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಬೆದರಿಕೆಯಿಂದ ಬೇಸತ್ತ ಡಾ. ಚಾಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.