ನೈತಿಕ ಪೊಲೀಸ್ಗಿರಿಗೆ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಸಾಥ್ ನೀಡಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೈತಿಕ ಪೊಲೀಸ್ ಗಿರಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿಗಳಿಗೆ ಬೆಂಬಲ ನೀಡುವ ಮೂಲಕ ಶಾಸಕ ಕೋಟ್ಯಾನ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಅನ್ಯಕೋಮಿನ ದಂಪತಿಯ ವಿರುದ್ಧ ಅನುಚಿತವಾಗಿ ವರ್ತಿಸಿದ ಹಿನ್ನೆಯಲ್ಲಿ ಆರೋಪಿಗಳಾದ ಸಮೀತ್ ರಾಜ್ ಹಾಗೂ ಸಂದೀಪ್ ಪೂಜಾರಿಯನ್ನು ಬಂಧಿಸಲಾಗಿತ್ತು. ಸಮೀತ್ ರಾಜ್ ಹಾಗೂ ಸಂದೀಪ್ ಪೂಜಾರಿ ಅನ್ಯಕೋಮಿನ ದಂಪತಿಯ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಈ ಪ್ರಕರಣದ ಸಂಬಂಧ ಜೈಲು ಪಾಲಾಗಿದ್ದ ಆರೋಪಿಗಳಿಗೆ ಇಂದು ಜಾಮೀನು ಮಂಜೂರಾಗಿದೆ. ಜಾಮೀನು ಮಂಜೂರಾದ ಆರೋಪಿಗಳ ಬೆನ್ನಿಗೆ ನಿಂತ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಗಳನ್ನು ಠಾಣೆಯಿಂದ ಹೊರ ತಂದಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶಾಸಕರ ನಡೆ ಅನೇಕರ ಕೆಂಗಣ್ಣಿಗೀಡಾಗಿದೆ.