ಅಮೆರಿಕದ ಜೈಲೊಂದರಲ್ಲಿ 2032ರವರೆಗೂ ಜೈಲು ಶಿಕ್ಷೆ ಅನುಭವಿಸಲಿರುವ ಕೈದಿಯೊಬ್ಬನ ಜೊತೆ ನೆದರ್ಲೆಂಡ್ನ ಮಹಿಳೆಯೊಬ್ಬಳು ನಿಶ್ಚಿತಾರ್ಥ ಮಾಡಿಕೊಂಡ ವಿಚಿತ್ರ ಘಟನೆಯೊಂದು ವರದಿಯಾಗಿದೆ.
ಕೆಲ್ಲಿ ಜ್ಯಾಕೋಬ್ಸ್ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಜೇಮ್ಸ್ ಡೆಂಟಲ್ ಎಂಬವರನ್ನ ಪ್ರೇಮಿಸಿದ್ದಾರೆ. ಆದರೆ ಈ ಲವ್ ಸ್ಟೋರಿಯಲ್ಲಿ ಟ್ವಿಸ್ಟ್ ಏನು ಅಂದರೆ ಜೇಮ್ಸ್ ಒಬ್ಬ ಕೈದಿ. ಮಾತ್ರವಲ್ಲದೇ ಈ ಪ್ರೇಮಿಗಳು ಇಲ್ಲಿಯವರೆಗೂ ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ. ಕೇವಲ ವಿಡಿಯೋ ಕಾಲ್, ಸಂದೇಶಗಳ ಮೂಲಕ ಮಾತ್ರವೇ ಸಂವಹನ ನಡೆಸಿದ್ದಾರೆ.
ಸಾವಿರಾರುಗಟ್ಟಲೇ ಮೈಲಿ ದೂರದಲ್ಲಿರುವ ಅಂದರೆ ನೆದರ್ಲೆಂಡ್ನ ಹೀರ್ಲೆನ್ನಲ್ಲಿ ವಾಸಿಸುತ್ತಿರುವ ಕೆಲ್ಲಿಗೆ ಡೆಂಟಲ್ ಪತ್ರವನ್ನ ಬರೆಯುತ್ತಿದ್ದ ಎನ್ನಲಾಗಿದೆ.
ಈ ಪತ್ರಗಳು ಯಾರಿಂದ ಬರುತ್ತಿದೆ ಎಂದು ಕುತೂಹಲಕ್ಕೆ ಒಳಗಾದ ಕೆಲ್ಲಿ ಹುಡುಕಾಟ ಶುರು ಮಾಡಿದ್ದಾರೆ. ಇದಾದ ಬಳಿಕವೇ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಆರಂಭವಾಯ್ತು ಎನ್ನಲಾಗಿದೆ. 32 ವರ್ಷದ ಡೆಂಟಲ್ ವಿಡಿಯೋ ಕಾಲ್ ಮೂಲಕವೇ ಕೆಲ್ಲಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಇದಕ್ಕೆ ಕೆಲ್ಲಿ ಕೂಡ ಒಪ್ಪಿಗೆ ನೀಡಿದ್ದು ಈ ವರ್ಷದ ಅಕ್ಟೋಬರ್ನಲ್ಲಿ ಮದುವೆಯಾಗಲು ಇಚ್ಛಿಸಿದ್ದಾರೆ.
ವಿಡಿಯೋ ಕಾಲ್ನ ಸ್ಕ್ರೀನ್ಶಾಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದರಲ್ಲಿ ಡೆಂಟಲ್ ಕೈಯಲ್ಲಿ ಉಂಗುರವನ್ನ ಹಿಡಿದು ಕ್ಯಾಮರಾವನ್ನ ನೋಡುತ್ತಾ ನಗುತ್ತಿರೋದನ್ನ ಕಾಣಬಹುದಾಗಿದೆ.
ಜೈಲಿನಲ್ಲೇ ಮಾಡಿದ ಉಂಗುರದಿಂದ ಆತ ನನಗೆ ಪ್ರಪೋಸ್ ಮಾಡಿದ್ದ. ಬಳಿಕ ಹೊರಗಡೆ ಯಾರೋ ಪರಿಚಯಸ್ಥರ ಸಹಾಯದಿಂದ ನನಗಾಗಿ ಉಂಗುರ ತರಿಸಿದ್ದಾನೆ. ಮದುವೆಗೆ ನಾನು ಸಾಂಪ್ರದಾಯಿಕ ಉಡುಗೆಗಳನ್ನ ಧರಿಸೋದಿಲ್ಲ. ಜೈಲಿನಲ್ಲಿ ನಡೆಯುವ ಮದುವೆಗೆ ಯಾರೂ ಆ ರೀತಿ ತಯಾರಾಗೋದಿಲ್ಲ ಎಂದು ಕೆಲ್ಲಿ ಹೇಳಿದ್ದಾರೆ.
ಈ ಪ್ರೇಮಕತೆಯಲ್ಲಿರುವ ದೊಡ್ಡ ಟ್ವಿಸ್ಟ್ ಅಂದರೆ ಡೆಂಟಲ್ ಬರೋಬ್ಬರಿ 20 ವರ್ಷಗಳ ಜೈಲುಶಿಕ್ಷೆಯನ್ನ ಅನುಭವಿಸುತ್ತಿದ್ದಾನೆ. 2012ರಲ್ಲಿ ಈತ ನಾಲ್ವರ ವಿರುದ್ಧ ಫೈರಿಂಗ್ ನಡೆಸಿದ್ದ ಎನ್ನಲಾಗಿದೆ. ಹೀಗಾಗಿ ಅವರು ಮದುವೆಯಾದರೂ ಸಹ ಜೊತೆಯಾಗಿ ಬಾಳಲು 2032ರ ವರೆಗೆ ಕಾಯಲೇಬೇಕಿದೆ..!