ಮಹಿಳೆ ಟೀ ಶರ್ಟ್ ಕಾರಣಕ್ಕೆ ಕಾರು ಮಾಲೀಕನಿಗೆ ನೋಟೀಸ್…! 20-10-2021 6:32AM IST / No Comments / Posted In: Latest News, Live News, International ಇದು ಬಹುಶಃ ಎಂದಿಗೂ ಸಂಭವಿಸಿರದ ಒಂದು ವಿಲಕ್ಷಣ ಘಟನೆಯಾಗಿದೆ. ಯುಕೆ ನಲ್ಲಿ ಕಾರು ಬಸ್ ಲೇನ್ ನಲ್ಲಿದ್ದದ್ದಕ್ಕಾಗಿ ಕಾರು ಚಾಲಕ ಡೇವಿಡ್ ನೈಟ್ ಎಂಬಾತನಿಗೆ ಸಾರಿಗೆ ಪ್ರಾಧಿಕಾರ ಪೆನಾಲ್ಟಿ ನೋಟಿಸ್ ಕಳುಹಿಸಿದೆ. ಆದರೆ, ವಿಚಿತ್ರವೆಂದರೆ ಡೇವಿಡ್ ನೈಟ್ ನ ಕಾರು ಎಂದಿಗೂ ಬಸ್ ಲೇನ್ ನಲ್ಲಿ ಇರಲಿಲ್ಲ. ಮನೆಯಿಂದ 120 ಮೈಲಿ ದೂರದಲ್ಲಿರುವ ಬಸ್ ಲೇನ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪೆನಾಲ್ಟಿ ನೋಟಿಸ್ ಪಡೆದಾಗ ಡೇವಿಡ್ ನಿಜಕ್ಕೂ ಗೊಂದಲಕ್ಕೊಳಗಾಗಿದ್ದಾನೆ. ಬಳಿಕ ಡೇವಿಡ್ ಮತ್ತು ಆತನ ಹೆಂಡತಿ ನಿಯಮ ಉಲ್ಲಂಘನೆಯ ಆರೋಪದ ಛಾಯಾಚಿತ್ರ ಸಾಕ್ಷ್ಯ ನೋಡಿದಾಗ ಅವರಿಬ್ಬರು ಬಿದ್ದು, ಬಿದ್ದು ನಕ್ಕಿದ್ದಾರೆ. ಏನಾಯಿತು ಅಂದ್ರೆ ಟ್ರಾಫಿಕ್ ಸಿಸಿ ಟಿವಿಯಲ್ಲಿ ಗಮನಿಸಿದಾಗ, ಮಹಿಳೆಯೊಬ್ಬಳು ಧರಿಸಿದ್ದ ಟಿ-ಶರ್ಟ್ ನಲ್ಲಿ ‘ನಿಟ್ಟರ್’ ಎಂದು ಬರೆಯಲಾಗಿತ್ತು. ಡೇವಿಡ್ ನ ಕಾರು ನೋಂದಣಿ ಫಲಕದಲ್ಲಿ ‘KN19TER’ ಇದ್ದುದರಿಂದ, ಕಂಪ್ಯೂಟರ್ ಗೊಂದಲಕ್ಕೊಳಗಾಗಿದೆ ಎಂದು ಡೈಲಿ ಮೇಲ್ ವರದಿ ತಿಳಿಸಿದೆ. ಛಾಯಾಚಿತ್ರ ಸಾಕ್ಷ್ಯದಲ್ಲಿ, ಮಹಿಳೆಯ ಟಿ-ಶರ್ಟ್ ಮೇಲೆ KNITTER ಎಂಬ ಪದ ಇದ್ದು, ಆಕೆ ಬಸ್ ಲೇನ್ನಲ್ಲಿ ನಡೆಯುತ್ತಿರುವುದು ಕಂಡು ಬಂದಿದೆ. ಬಳಿಕ ಈ ತಪ್ಪಿನ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ. ಅಧಿಕಾರಿಗಳು 90 ಪೌಂಡ್ ದಂಡವನ್ನು ರದ್ದುಗೊಳಿಸಿದ್ದಾರೆ. ಆದರೂ ಡೇವಿಡ್ ಮತ್ತು ಅವರ ಪತ್ನಿ ನಕ್ಕು ನಕ್ಕು ಸುಸ್ತಾಗಿದ್ದಾರೆ.