ಬಿಹಾರದ ಫುಲ್ವರಿ ಶರೀಫ್‌ನ ಅಂಜಲಿ ಯಾದವ್ ತಮ್ಮ ಸಂಶೋಧನೆಯಿಂದ ಜಾಗತಿಕ ಮನ್ನಣೆಗೆ ಭಾಜನರಾಗಿದ್ದಾರೆ. ಪ್ರೊಸ್ಟೇಟ್ (ಪುರುಷರ ಜನನಾಂಗದ ಒಂದು ಗ್ರಂಥಿ) ಕ್ಯಾನ್ಸರ್ ಸಂಬಂಧ ಮಹತ್ವದ ಸಂಶೋಧನೆ ಮಾಡಿರುವ ಅಂಜಲಿಗೆ ಅಮೆರಿಕದ ಕ್ಯಾನ್ಸರ್ ಸಂಶೋಧನಾ ಸಂಘಟನೆ ತನ್ನ ಪ್ರತಿಷ್ಠಿತ ಗ್ಲೋಬಲ್ ಸ್ಕಾಲರ್ ಪುರಸ್ಕಾರ ನೀಡಿ ಸನ್ಮಾನಿಸಲಿದೆ.
ಈ ವಿಚಾರ ತಿಳಿದ ಅಂಜಲಿಯ ತವರೂರಿನ ಮಂದಿ ಸಂಭ್ರಮದಲ್ಲಿ ಮುಳುಗಿದ್ದಾರೆ. ಅಂಜಲಿಯ ಮಾವ ಸತ್ಯೇಂದ್ರ ಪ್ರಸಾದ್ ಮಾತನಾಡಿ, “ನಾವು ಬಿಹಾರಿಗಳು ನಮ್ಮ ಸೊಸೆಯ ಸಾಧನೆಗೆ ಹೆಮ್ಮೆ ಪಡುತ್ತೇವೆ. ಪ್ರೊಸ್ಟೇಟ್ ಕ್ಯಾನ್ಸರ್ ಮೇಲಿನ ತಮ್ಮ ಸಂಶೋಧನೆಗಾಗಿ ಕೇವಲ ಹತ್ತು ಮಂದಿ ಯುವ ವಿಜ್ಞಾನಿಗಳು ಈ ಗೌರವಕ್ಕೆ ಭಾಜನರಾಗಿದ್ದು, ಇದೊಂದು ದೊಡ್ಡ ಸಾಧನೆಯೇ ಸರಿ,” ಎಂದಿದ್ದಾರೆ.
ಎಡ-ಬಲ ತಿಳಿಯದವರಿಗೆ ಇಲ್ಲಿದೆ ಹೊಸ ಐಡಿಯಾ
ಫೆಬ್ರವರಿ 1ರಂದು ಸನ್ಮಾನಿತರ ಹೆಸರುಗಳನ್ನು ಘೋಷಿಸಲಾಯಿತು. ಅಂಜಲಿ ಯಾದವ್ ಭಾರತದಿಂದ ಆಯ್ಕೆಯಾಗಿದ್ದಾರೆ. ಏಪ್ರಿಲ್‌ನಲ್ಲಿ ಅಮೇರಿಕನ್ ಕ್ಯಾನ್ಸರ್ ಅಸೋಸಿಯೇಷನ್ ಆಯೋಜಿಸಲಿರುವ ಕಾರ್ಯಕ್ರಮದಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಲು ಎಲ್ಲಾ 10 ವಿಜೇತರನ್ನು ಆಹ್ವಾನಿಸಲಾಗಿದೆ. ಈ ಸಮ್ಮೇಳನವು ಅಮೆರಿಕದ ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆಯಲಿದೆ.
ಅಂಜಲಿ ಯಾದವ್ ಮೂಲತಃ ಉತ್ತರ ಪ್ರದೇಶದ ದಿಯೋರಿ ಎಂಬ ಊರಿನ ನಿವಾಸಿ. ಅವರು 2019 ರಲ್ಲಿ ಬಿಹಾರದ ಫುಲ್ವಾರಿ ಷರೀಫ್‌ನ ಐಸೊಪುರದ ಸತ್ಯೇಂದ್ರ ಪ್ರಸಾದ್ ಅವರ ಮಗ ಮುಖೇಶ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಮುಕೇಶ್ ಕುಮಾರ್ ಅವರು ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ನರವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
ಅಂಜಲಿ ಪ್ರಸ್ತುತ ಐಐಟಿ ಕಾನ್ಪುರದಲ್ಲಿ ಕೆಲಸ ಮಾಡುತ್ತಿದ್ದು, ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅಂಜಲಿ 2017ರಲ್ಲಿ ಅಮೆರಿಕದ ಒರ್ಲ್ಯಾಂಡೊ ನಗರದಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ತಮ್ಮ ಸಂಶೋಧನೆಯನ್ನು ಸಲ್ಲಿಸಿದ್ದರು.