ಅಕ್ಷಯ್ ಕುಮಾರ್, ಅನುಪಮ್ ಖೇರ್ ಅಭಿನಯದ ’ಸ್ಪೆಷಲ್ 26’ ಚಿತ್ರವು ಬಾಲಿವುಡ್ನ ಅತ್ಯಂತ ವಿಶಿಷ್ಟ ಚಿತ್ರಗಳಲ್ಲಿ ಒಂದಾಗಿದೆ. ಕಾನೂನು ಪಾಲನೆ ಪಡೆಗಳ ಸೋಗಿನಲ್ಲಿ ದೊಡ್ಡ ದೊಡ್ಡ ವರ್ತಕರ ಮೇಲೆ ದಾಳಿ ಮಾಡಿ ಸಿಕ್ಕಿದ್ದೆಲ್ಲಾ ದೋಚಿ ಪರಾರಿಯಾಗುವ ಚತುರಮತಿ ಕಳ್ಳರ ಕಥೆಯ ಈ ಚಿತ್ರದಿಂದ ಸ್ಪೂರ್ತಿ ಪಡೆದು ಹಾಗೇ ಮಾಡಿರುವ ಎರಡು ನಿದರ್ಶನ ಬಿಹಾರದಲ್ಲಿ ಜರುಗಿವೆ.
ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಇಲ್ಲಿನ ಗೋಪಾಲ್ಗಂಜ್ ಮತ್ತು ಕೋಯಲದೇವ ಬಜ಼ಾರ್ನ ಆಭರಣದಂಗಡಿಗಳ ಮೇಲೆ ನಕಲಿ ದಾಳಿ ಮಾಡಿದ ಕಳ್ಳರ ಗುಂಪೊಂದು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಜೊತೆಗೆ ಪರಾರಿಯಾಗಿದೆ.
ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್
ಬೈಕೊಂದರಲ್ಲಿ ನೀಲಿ ಬಣ್ಣದ ಸಫಾರಿ ಧರಿಸಿ ಬಂದ ದುಷ್ಕರ್ಮಿಗಳು ಶಂಕರ್ ಸೋನಿ ಎಂಬುವವರ ಆಭರಣದಂಗಡಿ ಪ್ರವೇಶಿಸಿ ಅಂಗಡಿ ಮಾಲೀಕನಿಗೆ ತನಿಖೆಗೆಂದು ಆಭರಣ ತೋರಲು ತಿಳಿಸಿದ್ದಾರೆ. ಈ ವೇಳೆ ಮಾಲೀಕನಿಗೆ ಬೆದರಿಕೆಯೊಡ್ಡಿದ ಕಳ್ಳರು ಆತನಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಪರಿಶೀಲನೆ ನೆವದಲ್ಲಿ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದೇ ದಿನ ಮತ್ತೊಂದು ಆಭರಣದಂಗಡಿಯಲ್ಲಿ ಹೀಗೇ ದಾಳಿ ಮಾಡಿ ಅಲ್ಲಿಂದಲೂ 1.5 ಲಕ್ಷ ರೂಪಾಯಿಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಈ ಅಂಗಡಿಗಳ ಮಾಲೀಕರು ವಿಷಯವನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ತಿಳಿಸಿದ್ದಾರೆ. ಕಳ್ಳರನ್ನು ಪತ್ತೆ ಮಾಡಲು ಪೊಲೀಸರು ಜಾಲ ಬೀಸಿದ್ದು, ತನಿಖೆ ಪ್ರಗತಿಯಲ್ಲಿದೆ.