alex Certify BIGG NEWS : ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನ.9 ರಂದು 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ : ಸಚಿವ ಸಂತೋಷ್ ಲಾಡ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನ.9 ರಂದು 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ : ಸಚಿವ ಸಂತೋಷ್ ಲಾಡ್ ಮಾಹಿತಿ

ದಾವಣಗೆರೆ :  ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಾರ್ಮಿಕರ ಮಕ್ಕಳು ವಿದ್ಯಾರ್ಥಿವೇತನಕ್ಕೆ ಸಲ್ಲಿಸಿದ ಅರ್ಜಿಗಳಲ್ಲಿ ಈ ಹಿಂದಿನ 7 ಲಕ್ಷ ವಿದ್ಯಾರ್ಥಿಗಳಿಗೆ ನವೆಂಬರ್ 9 ರಂದು ವಿಧಾನಸೌಧದ ಬ್ಯಾಕ್ವೇಟ್ ಹಾಲ್‍ನಲ್ಲಿ ಏರ್ಪಡಿಸುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ವಿದ್ಯಾರ್ಥಿವೇತನ ನೀಡಿಕೆಗೆ ಚಾಲನೆ ನೀಡಲಿದ್ದಾರೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಎಸ್.ಲಾಡ್ ತಿಳಿಸಿದರು.

 ಅವರು ಶನಿವಾರ ಪಾಲಿಕೆಯ ಸಭಾಂಗಣದಲ್ಲಿ ಸಂಘಟಿತ, ಅಸಂಘಟಿತ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಂದ ಅಹವಾಲು ಆಲಿಸಿ ಸರ್ಕಾರದಿಂದ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಮಾತನಾಡಿದರು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 6500 ಕೋಟಿ ಸೆಸ್ ಸಂಗ್ರಹ ಇರುತ್ತದೆ. ಮಂಡಳಿಯಲ್ಲಿ 1.82 ಕೋಟಿ ಕಾರ್ಮಿಕರು ನೊಂದಣಿಯಾಗಿರುತ್ತಾರೆ. ಆದರೆ ಪ್ರತಿ ವರ್ಷ ಅಂದಾಜು 1000 ಕೋಟಿಯಷ್ಟು ಸೆಸ್ ಸಂಗ್ರಹವಾಗುತ್ತಿದ್ದು ಇದರಲ್ಲಿ 800 ಕೋಟಿಯಷ್ಟು ಸರ್ಕಾರದ ವಲಯದಿಂದ ಸಂಗ್ರಹವಾದರೆ ಖಾಸಗಿ ವಲಯದಿಂದ 200 ಕೋಟಿ ಮಾತ್ರ ಸೆಸ್ ಸಂಗ್ರಹವಾಗುತ್ತಿದೆ. ವಿದ್ಯಾರ್ಥಿವೇತನ, ಮದುವೆ, ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಕನಿಷ್ಠ 3000 ಕೋಟಿ ಬೇಕಾಗುತ್ತದೆ ಎಂದರು.

 ಕಾರ್ಮಿಕ ಮಂಡಳಿಗೆ ಸಂಗ್ರಹವಾಗುತ್ತಿರುವ ಸೆಸ್ ಕಡಿಮೆ ಇದ್ದು ಇದನ್ನು ಹೆಚ್ಚು ಸಂಗ್ರಹಿಸಲು ಮತ್ತು ಕೇಂದ್ರ ಸರ್ಕಾರದಿಂದ ಬರಬೇಕಾದ ಸೆಸ್ ಬಾರದಿರುವುದರಿಂದ ಸಂಗ್ರಹ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.

 ಕಲ್ಯಾಣ ಮಂಡಳಿ ಉಳಿಸಿ ಬೆಳೆಸಲು ಹೊಸ ಕಾನೂನು; ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಉಳಿಸಿ ಬೆಳೆಸುವ ಮೂಲಕ ಇದರ ಸಾಮಥ್ರ್ಯವನ್ನು ಇನ್ನೂ ಹೆಚ್ಚಿಸಲು  ಹೊಸ ಕಾನೂನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಹೊಸ ಟೆಕ್ನಾಲಜಿ ಆಪ್ ಬಿಡುಗಡೆ ಮಾಡಲಾಗುತ್ತದೆ. ಹೊಸ ಟೆಕ್ನಾಲಜಿಯಿಂದ ಎಲ್ಲ ಮಾಹಿತಿಯು ಸಂಗ್ರಹವಾಗಲಿರುವುದರಿಂದ ಸೆಸ್ ಸಂಗ್ರಹ ಮತ್ತು ನಿರ್ವಹಣೆ ಸುಲಭವಾಗಲಿದೆ ಎಂದರು.

ಮನೆ ಕೆಲಸ, ಗಿಗ್ ಕೆಲಸಗಾರರಿಗೆ ಕಲ್ಯಾಣ ಕಾರ್ಯಕ್ರಮ; ಮನೆ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು ಮತ್ತು ವಿವಿಧ ಇ-ಕಾಮರ್ಸ್‍ನಲ್ಲಿ ಕೆಲಸ ಮಾಡುವವರಿಗೆ ಗಿಗ್ ಕಾರ್ಮಿಕರೆಂದು ಕರೆಯಲಾಗುತ್ತದೆ. ಇವರಿಗೂ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಲಾಗಿದ್ದು ಮನೆ ಕೆಲಸದ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಆಸ್ತಿ ತೆರಿಗೆಯಲ್ಲಿ ಸೆಸ್ ಸಂಗ್ರಹಿಸುವ ಮೂಲಕ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವಿದ್ದು ವರ್ಷದಲ್ಲಿ ಅನುಷ್ಟಾನಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಟೋಲ್ ಫ್ರೀ; ಕಾರ್ಮಿಕರ ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆಯನ್ನು ಸ್ಥಾಪಿಸಲಾಗುತ್ತಿದ್ದು ಕನಿಷ್ಠ ವೇತನವನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರಿಗೆ ಟೋಲ್ ಫ್ರೀ ಸಂಖ್ಯೆಯಿಂದ ಪರಿಹಾರ, ತಾತ್ಕಾಲಿಕ ಸಹಾಯ ಮತ್ತು ಕುಂದುಕೊರತೆಗಳ ನಿವಾರಣೆಗೆ ಸಹಕಾರಿಯಾಗಲಿದೆ.

ಹೊರಗುತ್ತಿಗೆ ಜಿಲ್ಲಾವಾರು ಸೊಸೈಟಿ; ಹೊರಗುತ್ತಿಗೆ ಕಾರ್ಮಿಕರ ಹಿತ ಕಾಪಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾವಾರು ಹೊರಗುತ್ತಿಗೆ ಸೊಟೈಟಿ ಮಾಡುವ ಮೂಲಕ ಈಗಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಸೊಸೈಟಿ ಮೂಲಕ ಇಪಿಎಫ್, ಇಎಸ್‍ಐ ಸೌಲಭ್ಯಗಳು ತ್ವರಿತಗತಿಯಲ್ಲಿ ಸಿಗುವಂತೆ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರಿ ವಲಯದಲ್ಲಿ ವಿವಿಧ ಜಿಲ್ಲೆಗಳಲ್ಲಿ 4 ಲಕ್ಷಕ್ಕಿಂತ ಅಧಿಕ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು ಇವರೆಲ್ಲರಿಗೂ ಅನುಕೂಲವಾಗಲಿದೆ ಎಂದರು.

ಪ್ರತ್ಯೇಕ ಸಾರಿಗೆ ಮಂಡಳಿ; ಸಾರಿಗೆ ವಲಯದಲ್ಲಿ 35 ಲಕ್ಷ ವಾಣಿಜ್ಯ ಬಳಕೆಯ ವಾಹನ ಚಾಲಕರು ಮತ್ತು ಇದಲ್ಲದೇ ಗ್ಯಾರೇಜ್ ಮ್ಯಾಕ್ಯಾನಿಕ್, ಕ್ಲೀನರ್‍ಗಳಿದ್ದು ಇವರ ಕಲ್ಯಾಣ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಪ್ರತ್ಯೇಕವಾಗಿ ಸಾರಿಗೆ ಮಂಡಳಿಯನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಸಂಗ್ರಹವಾಗುವ ಶೇ 11 ರ ಸೆಸ್‍ನಲ್ಲಿ ಶೇ 27 ರಷ್ಟು ಸಾರಿಗೆ ಮಂಡಳಿಗೆ ಸೆಸ್ ನೀಡಲು ಕೇಳಿದ್ದು ಇದರ ಮೂಲಕ ಸಾರಿಗೆ ಕಲ್ಯಾಣ ಮಂಡಳಿ ಸ್ಥಾಪನೆ ಮಾಡುವ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ಈ ವಲಯದಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಿ ಅನುಮತಿ ಕೇಳಲಾಗಿದೆ ಎಂದರು.

ಸಿನಿ ಕಾರ್ಮಿಕರಿಗೆ ಕಾನೂನು; ಚಲನಚಿತ್ರ, ಕಿರುತೆರೆ, ಚಿತ್ರಮಂದಿರಗಳನ್ನು ಕೆಲಸ ಮಾಡುವವರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಜಾರಿಗೆ ಇವರಿಗೆ ಪ್ರತ್ಯೇಕ ಕಾನೂನು ರೂಪಿಸುವ ಇಂಗಿತವನ್ನು ಸಚಿವರು ವ್ಯಕ್ತಪಡಿಸಿದರು.

ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ; ಕಾರ್ಮಿಕ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಅವರಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಬೇಕೆಂದು ಸಾಕಷ್ಟು ಕಾರ್ಮಿಕ ಸಂಘಟನೆಗಳ ಒತ್ತಾಯವಾಗಿದ್ದು ಪ್ರತಿ ತಿಂಗಳು ವೇತನ ಸಹಿತ ಒಂದು ದಿನ ಮುಟ್ಟಿನ ರಜೆಯನ್ನು ನೀಡುವ ಬಗ್ಗೆ ಪ್ರಸ್ತಾವನೆ ಇದೆ ಎಂದು ಸಂವಾದಲ್ಲಿ ಭಾಗವಹಿಸಿದ ಕಾರ್ಮಿಕ ಮುಖಂಡರಿಗೆ ತಿಳಿಸಿದರು.

ಹಮಾಲರ ನಿವೃತ್ತಿ ವಯಸ್ಸು ಏರಿಕೆಗೆ ಕ್ರಮ; ಎಪಿಎಂಸಿಗಳಲ್ಲಿ ಕೆಲಸ ಮಾಡುವ ಹಮಾಲರಿಗೆ 60 ವರ್ಷದ ನಂತರ ಅವರ ಪರವಾನಗಿಯನ್ನು ನವೀಕರಣ ಮಾಡಲಾಗುತ್ತಿಲ್ಲ, ಇದರಿಂದ ನಮಗೆ ಯಾವುದೇ ಜೀವನ ನಿರ್ವಹಣಾ ದುಡಿಮೆ ಇಲ್ಲದಿರುವುದರಿಂದ ವಯೋಮಿತಿ ಹೆಚ್ಚಿಸಬೇಕೆಂದಾಗ ಈ ವಯಸ್ಸನ್ನು 65 ವರ್ಷಗಳಿಗೆ ಏರಿಕೆ ಮಾಡಲು ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿ ಶ್ರಮಿಕ ಭವನಕ್ಕೆ ಮೂಲಭೂತ ಸೌಕರ್ಯಗಳಿಲ್ಲ ಎಂದು ತಿಳಿಸಿದ್ದು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಚಿಂದಿ ಆಯುವವರಿಗೆ ಒಣಕಸ ನೀಡಿ; ಚಿಂದಿ ಆಯುವವರ ಬದುಕು ದುಸ್ತರವಾಗಿದ್ದು ನಗರಸಭೆಯಿಂದ ಸಂಗ್ರಹವಾಗುವ ಒಣಕಸವನ್ನು ಚಿಂದಿ ಆಯುವವರಿಗೆ ನೀಡಬೇಕೆಂದು ಗೀತಮ್ಮ ಪ್ರಸ್ತಾಪಿಸಿದಾಗ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಮುಂದೆ ಬರಲು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...