alex Certify BIG NEWS : ʻಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯನ್ನು ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸುವಂತಿಲ್ಲʼ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ʻಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯನ್ನು ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸುವಂತಿಲ್ಲʼ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು :  ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯನ್ನು ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ  ಮಾಡಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಸ್ವಚ್ಛತೆ ಮಾಡಿಸುತ್ತಿರುವ ಕುರಿತಾದ ಘಟನೆಗಳು ಸರ್ಕಾರದ ಮತ್ತು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ, ಸಹ ಪಠ್ಯ ಚಟುವಟಿಕೆಗಳಲ್ಲಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಂತಹ ಕಾರ್ಯಗಳಿಂದ ದೂರವಿರಿಸುವುದು ಅಧಿಕಾರಿಗಳ, ಮುಖ್ಯ ಶಿಕ್ಷಕರ, ಶಿಕ್ಷಕರ, ಸಿಬ್ಬಂದಿಗಳ ಕರ್ತವ್ಯವಾಗಿರುತ್ತದೆ. ಆದರೆ ಅವರುಗಳು ಈ ಹೊಣೆಗಾರಿಕೆಯನ್ನು ಮರೆತು ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆಕ್ಷೇಪಣೀಯ ಮತ್ತು ಖಂಡನೀಯ. ಇಂತಹ ಘಟನೆಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳ ಸ್ವಚ್ಛತೆಯನ್ನು ನಿರ್ವಹಿಸುವ ಕುರಿತು ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಂಬಂಧಿಸಿದ ಎಲ್ಲರಿಗೂ ತಿಳಿಸಲಾಗಿದೆ.

  1. ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತಾ ಕಾರ್ಯ ಮತ್ತು ನಿರ್ವಹಣೆಯನ್ನು ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲಿಯೂ ಸಹ ವಿದ್ಯಾರ್ಥಿಗಳಿಂದ ಕೈಗೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  1. ಉಲ್ಲೇಖಿತ ಸುತ್ತೋಲೆಯ ಅನುಸಾರ ಶಾಲಾ ನಿರ್ವಹಣಾ ಅನುದಾನವನ್ನು ಆಯಾ ಸರ್ಕಾರಿ ಶಾಲೆಗಳಿಗೆ ಪ್ರಸ್ತುತ ಸಾಲಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಸದರಿ ಅನುದಾನವನ್ನು ಪ್ರಥಮ ಪ್ರಾಶಸ್ತ್ರದಲ್ಲಿ ಶೌಚಾಲಯಗಳ ಸ್ವಚ್ಛತಾ ಕಾರ್ಯಗಳಿಗೆ ಬಳಸಿಕೊಂಡು ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ) ಗಳ ಸಹಕಾರದೊಂದಿಗೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಶೌಚಾಲಯಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳತಕ್ಕದ್ದು.
  1. ಒಂದು ವೇಳೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಸಿಬ್ಬಂದಿಗಳಾಗಲಿ ವಿದ್ಯಾರ್ಥಿಗಳನ್ನು ಶಾಲಾ ಶೌಚಾಲಯಗಳ ಸ್ವಚ್ಛತೆಗಾಗಿ ಬಳಸಿಕೊಂಡಲ್ಲಿ ಅಂತಹವರ ಮೇಲೆ ಇಲಾಖಾ ವತಿಯಿಂದ ನಿಯಮಾನುಸಾರ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು ಹಾಗೂ ಪ್ರಥಮ ವರ್ತಮಾನ ವರದಿ (FIR) ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.
  1. ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ)ಗಳು ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸತಕ್ಕದ್ದು ಯಾವುದೇ ವಿದ್ಯಾರ್ಥಿಗಳು ಶಾಲಾ ಶೌಚಾಲಯಗಳ ತೊಡಗಿಸಿಕೊಂಡಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿರುತ್ತದೆ.
  2. ಶಾಲೆಗಳಿಗೆ ಕಾಲ-ಕಾಲಕ್ಕೆ ಖುದ್ದು ಭೇಟಿ ನೀಡಿ ಶಾಲೆಗಳಲ್ಲಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾದ ಬಳಕೆಗೆ ಯೋಗ್ಯವಾದ ಶೌಚಾಲಯಗಳು ಲಭ್ಯವಿರುವುದನ್ನು ಪರಿಶೀಲಿಸಿ ಮತ್ತು ಶಾಲಾ ಅವಧಿಯಲ್ಲಿ ಈ ಶೌಚಾಲಯಗಳಿಗೆ ಬೀಗ ಹಾಕದೇ ವಿದ್ಯಾರ್ಥಿಗಳ ಉಪಯೋಗಕ್ಕೆ ಅವಕಾಶ ಕಲ್ಪಿಸಿರುವುದನ್ನು ಹಾಗೂ ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವುದಿಲ್ಲ ಎಂಬ ಅಂಶಗಳನ್ನು ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಶಾಲಾ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈ ಮೂಲಕ ಸೂಚಿಸಲಾಗಿದೆ.
  1. ಶಾಲೆಯ ಸಂದರ್ಶನದ ವೇಳೆಯಲ್ಲಿ ಒಂದು ವೇಳೆ ವಿದ್ಯಾರ್ಥಿಗಳನ್ನು ಶಾಲಾ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಲ್ಲಿ, ಅದಕ್ಕೆ ಕಾರಣರಾದವರ ಮೇಲೆ ಮೇಲ್ಕಂಡಂತೆ ತತ್‌ಕ್ಷಣವೇ ಕ್ರಮವಹಿಸಲು ಅನುವಾಗುವಂತೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಉಪನಿರ್ದೇಶಕರು (ಆಡಳಿತ)ರವರಿಗೆ ತಕ್ಷಣ ವರದಿ ಮಾಡಲು ಶಾಲಾ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಿಳಿಸಿದೆ.
  1. ಅದರಂತೆ ಇಂತಹ ಪ್ರಕರಣಗಳಲ್ಲಿ ತತ್‌ಕ್ಷಣವೇ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು(ಆಡಳಿತ)ರವರು ಮೇಲೆ ತಿಳಿಸಿರುವಂತೆ ಸಂಬಂಧಿಸಿದವರ ಮೇಲೆ ಜರೂರಾಗಿ ಕ್ರಮವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ. ತಪ್ಪಿದಲ್ಲಿ ಅಥವಾ ನಿರ್ಲಕ್ಷತನ ತೋರಿದಲ್ಲಿ ಮತ್ತು ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ಅದಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೆಶಕರು(ಆಡಳಿತ) ರವರನ್ನೇ ನೇರ ಹೊಣೆಗಾರರನ್ನಾಗಿಸಿ ಇಲಾಖೆ ನಿಯಮಾನುಸಾರ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
  1. ಇದೇ ರೀತಿ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿಯು ಸಹ ಇಂತಹ ಯಾವುದೇ ಪ್ರಕರಣಗಳು ಜರುಗದಂತೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಾಲಾ ಮುಖ್ಯಸ್ಥರು ಎಚ್ಚರಿಕೆ ವಹಿಸಲು ತಿಳಿಸಿದೆ.

ಮೇಲ್ಕಂಡ ಎಲ್ಲಾ ಅಂಶಗಳನ್ನು ಹಾಗೂ ಈ ಕುರಿತು ಸರ್ಕಾರದಿಂದ ಮತ್ತು ಇಲಾಖೆಯಿಂದ ಕಾಲ-ಕಾಲಕ್ಕೆ ಹೊರಡಿಸಲಾಗುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಲು ಹಾಗೂ ವಿದ್ಯಾರ್ಥಿಗಳನ್ನು ಶಾಲಾ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ವಹಿಸುವಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳಿಗೆ ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...