ಬೆಂಗಳೂರು: 545 ಪಿ ಎಸ್ ಐ ಹುದ್ದೆ ನೇಮಕಾತಿ ಹಗರಣದ ತನಿಖೆ ಅಂತಿಮ ಹಂತ ತಲುಪುತ್ತಿರುವಾಗಲೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಪಿಎಸ್ ಐಯನ್ನು, ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ಪಿ ಎಸ್ ಐ ಶರೀಫ್ ಕಲಿಮಠ್ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿ ಪಿಎಸ್ ಐ ನೇಮಕಾತಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಕಾಮಾಕ್ಷಿ ಪಾಳ್ಯ ಠಾಣೆಯ ಪಿ ಎಸ್ ಐ ಆಗಿ ಕಾರ್ಯನಿರ್ವಹಿಸಿದ್ದ. ಈಗಾಗಲೇ ಬಂಧಿತರಾಗಿದ್ದ ಎಸ್ ಡಿಎ ಹರ್ಷಾ ಹಾಗೂ ಇನ್ನಿತರ ಅಭ್ಯರ್ಥಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದ.
ಕಳೆದ ಮೂರು ತಿಂಗಳಿಂದ ನಾಪತ್ತೆಯಾಗಿದ್ದ ಶರೀಫ್ ನನ್ನು ಸಿಐಡಿ ಅಧಿಕಾರಿಗಳು ಮುಂಬೈನಲ್ಲಿ ಬಂಧಿಸಿದ್ದಾರೆ. ಬಂಧಿತ ಶರೀಫ್ ನನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶ ಹೊರಡಿಸಿದೆ.