ಬೆಳಗಾವಿ: ಬೆಳಗಾವಿಯ ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಶಿಬಿರದಲ್ಲಿದ್ದ 2 AK-47 ರೈಫಲ್ ಗಳು ಕಳುವಾಗಿದ್ದು, ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ತರಬೇತಿಗೆಂದು ಮಧುರೈನಿಂದ ಐಟಿಬಿಪಿ 45ನೇ ಬೆಟಾಲಿಯನ್ ಯೋಧರು ಆಗಮಿಸಿದ್ದು, ಈ ಯೋಧರ ಪೈಕಿ ರಾಜೇಶ್ ಕುಮಾರ್, ಸಂದೀಪ್ ಮೀನಾ ಅವರಿಗೆ ಸೇರಿದ ಎಕೆ-47 ರೈಫಲ್ ಗಳು ಕಳುವಾಗಿವೆ.
ಶಿಬಿರದಲ್ಲಿ ಆಗಸ್ಟ್ 17ರಂದು ರಾತ್ರಿ ಮಲಗುವಾಗ ಎಕೆ 47 ರೈಫಲ್ ಗಳನ್ನು ವಾಡಿಕೆಯಂತೆ ಭದ್ರತೆಯಲ್ಲಿಯೇ ಇಡಲಾಗಿದೆ. ಆದರೆ ಬೆಳಿಗ್ಗೆ ನೋಡುವಷ್ಟರಲ್ಲಿ 2 ರೈಫಲ್ ಗಳು ಕಣ್ಮರೆಯಾಗಿವೆ. ಎಕೆ-47 ರೈಫಲ್ ಗಳ ಪತ್ತೆಗಾಗಿ ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ.
ಒಂದು ವೇಳೆ ಕಳುವಾಗಿರುವ ರೈಫಲ್ ಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ಅನಾಹುತವೇ ಸಂಭವಿಸಬಹುದು ಎಂಬ ಆತಂಕ ಎದುರಾಗಿದ್ದು, ಜಿಲ್ಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.