ಬೆಂಗಳೂರು: ಪ್ರಾಮಾಣಿಕವಾಗಿ ನಾವು ತೆರಿಗೆ ಕಟ್ಟಿದ್ದು ತಪ್ಪಾಗಿದೆ ಎಂಬ ಭಾವನೆ ಮೂಡುತ್ತಿದೆ. ಕೇಂದ್ರ ಸರ್ಕಾರ ಜಿ ಎಸ್ ಟಿ ವಿಚಾರದಲ್ಲಿ ನಮಗೆ ಯಾವಾಗ ಬೇಕಾದರೂ ನೇಣು ಹಾಕಬಹುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಜಿ ಎಸ್ ಟಿ ವಿಚಾರವಾಗಿ ನಾವು ನಮ್ಮ ಕುತ್ತಿಗೆ, ಹಗ್ಗ ಎರಡನ್ನೂ ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇವೆ. ಅವರು ಯಾವಾಗ ನಮಗೆ ನೇಣು ಹಾಕುತ್ತಾರೋ ಎಂಬ ಆತಂಕ ಎದುರಾಗಿದೆ. ಈ ಮಾತನ್ನು ನಾನು 2017ರಲ್ಲಿಯೇ ಹೇಳಿದ್ದೆ. ಆರ್ಥಿಕ ಸರ್ವಾಧಿಕಾರ ಎಂಬುದು ಒಕ್ಕೂಟ ವ್ಯವಸ್ಥೆಯಲ್ಲಿ ಮಾರಕವಾದದ್ದು. ನಮ್ಮ ತೆರಿಗೆ ಹಣವನ್ನು ಕೇಂದ್ರಕ್ಕೆ ಕಟ್ಟುತ್ತೇವೆ. ಇದರಿಂದ ರಾಜ್ಯಗಳಿಗೆ ಇರುವ ಅವಕಾಶವೂ ಇಲ್ಲದಂತಾಗಿದೆ ಎಂದು ಗುಡುಗಿದ್ದಾರೆ.
ಆಯತಪ್ಪಿ ಬಿದ್ದು ಇಬ್ಬರು ಪ್ಯಾರಾಗ್ಲೈಡರ್ ದಾರುಣ ಸಾವು….!
ಈ ಹಿಂದೆ ಕೇಂದ್ರ ಸರ್ಕಾರದಿಂದ ಶೇ.73ರಷ್ಟು ಅನುದಾನ ಬರುತ್ತಿತ್ತು. ಈಗ ಶೇ.49ಕ್ಕೆ ಇಳಿದಿದೆ. ಇದಕ್ಕೆ ಕಾರಣವೇನು ಎಂಬುದನ್ನು ವಿವರಿಸಬೇಕು. ಬಜೆಟ್ ನಲ್ಲಿ ರಾಜ್ಯ ಸರ್ಕಾರ ಕೊರತೆ ತೋರಿಸಲು ಕಾರಣವೇನು? ಕೇಂದ್ರದ ಅನುಕಂಪಕ್ಕಾಗಿಯೇ? ಎಂದು ಪ್ರಶ್ನಿಸಿದ್ದಾರೆ.
ಗುಜರಾತ್, ರಾಜಸ್ಥಾನಗಳಿಗೆ ಕೇಂದ್ರ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತದೆ. ಉತ್ತರ ಪ್ರದೇಶಕ್ಕೆ 256 ಕೋಟಿ ಅನುದಾನ ನೀಡುತ್ತಾರೆ. ಅಲ್ಲಿನ ಜನಸಂಖ್ಯೆ, ತಲಾದಾಯದ ಮೇಲೆ ಅನುದಾನ ನೀಡುತ್ತಿದೆ. ಆದರೆ ನಮ್ಮ ರಾಜ್ಯಕ್ಕೆ ಏಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕೇಳಿದ್ದಾರೆ.
ಇದೇ ವೇಳೆ ಮೇಕೆದಾಟು ವಿಚಾರವಾಗಿಯೂ ಪ್ರಸ್ತಾಪಿಸಿದ ಕುಮಾರಸ್ವಾಮಿ, ಡಿ ಪಿ ಆರ್ ನಲ್ಲಿ ಹೆಚ್ಚುವರಿ ನೀರು ಬಳಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿದೆ. ತಮಿಳುನಾಡು, ಕರ್ನಾಟಕ ಎರಡೂ ರಾಜ್ಯಗಳು ಚರ್ಚಿಸಬೇಕು. ಯೋಜನೆಗಾಗಿ ರಾಜ್ಯ ಸರ್ಕಾರ 1000 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಾವಿರ ಕೋಟಿ ಕೇವಲ ಕೊಣ್ಣೊರೆಸುವ ತಂತ್ರವಾಗಬಾರದು ಎಂದು ಹೇಳಿದರು.