ಮೈಸೂರು: ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗಳಿಗೆ ಒಳಗಾಗಬಾರದು, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಬಂದರೆ ಮಾತ್ರ ಅವಕಾಶ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಸಮವಸ್ತ್ರ ಧರಿಸಿ ಬನ್ನಿ. ಹಿಜಾಬ್ ಹಾಕಿ ಬಂದರೂ ತರಗತಿಗೆ ಪ್ರವೇಶವಿಲ್ಲ, ಕೇಸರಿ ಶಾಲು ಹಾಕಿ ಬಂದರೂ ತರಗತಿಗಳಿಗೆ ಪ್ರವೇಶ ಇಲ್ಲ. ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ ಎಂದರು.
ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಜಾರಿ ಮಾಡಿರುವುದರ ಉದ್ದೇಶವೇ ಸಮಾನತೆಯ ಸಂಕೇತ ಎಂಬ ಕಾರಣಕ್ಕೆ. ಶಾಲೆಗಳಲ್ಲಿ ಜ್ಞಾನಾರ್ಜನೆಗಾಗಿ ಶಿಕ್ಷಣಕ್ಕಾಗಿ ಬರಬೇಕೇ ಹೊರತು ಧರ್ಮಾಚರಣೆ ಪಾಲನೆಗೋ ಅಥವಾ ಮತೀಯ ಭಾವನೆ ಪ್ರಚೋದನೆ ನಿಡುವುದೋ ಉದ್ದೇಶವಾಗಬಾರದು. ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗಬಾರದು ಜ್ಞಾನಾರ್ಜನೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಹಿಜಾಬ್ ವಿವಾದದ ಹಿಂದೆ ರಾಜಕೀಯ ನಾಯಕರ ಪಿತೂರಿ ಇದೆ. ಇದು ಯಾವುದೋ ರಾಜಕೀಯ ಪಕ್ಷದ ಕೈವಾಡ ಎಂದು ಹೇಳುತ್ತಿಲ್ಲ. ಕೆಲ ರಾಜಕೀಯ ನಾಯಕರ ಕೈವಾಡವಾಗಿದೆ. ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆ ಸರಿಯಲ್ಲ. ಶಾಲೆಗಳಿಗೆ ಸಮವಸ್ತ್ರದ ಬದಲು ಬೇರೆ ವಸ್ತ್ರಸಂಹಿತೆಗೆ ಅವಕಾಶವಿಲ್ಲ ಎಂದು ಹೇಳಿದರು.
ಸಮವಸ್ತ್ರ ವ್ಯವಸ್ಥೆ ಜಾರಿ ಮಾಡಲು ಕಾರಣ ನಾವೆಲ್ಲರೂ ಸಮಾನರು ಎಂಬ ಭಾವನೆ ಬರಬೇಕು ಎಂದು. ಬಡವರು, ಶ್ರೀಮಂತರು, ಮೇಲು, ಕೀಳು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಬರಕೂಡದು ಎಂಬ ಕಾರಣಕ್ಕೆ. ಮಕ್ಕಳಿಗೆ ಮತೊಮ್ಮೆ ಮನವಿ ಮಾಡುತ್ತಿದ್ದೇನೆ. ಶಾಲೆ-ಕಾಲೇಜುಗಳಿಗೆ ನೀವು ಬರುತ್ತಿರುವುದು ಶಿಕ್ಷಣಕ್ಕಾಗಿ. ಅದನ್ನು ಬಿಟ್ಟು ಹಿಜಾಬ್, ಕೇಸರಿ ಶಾಲು ಎಂಬ ವಿವಾದ ಸೃಷ್ಟಿಸುವುದು ಬೇಡ ಎಂದು ತಿಳಿಸಿದರು.