ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಹಲಾಲ್ ಹಾಗೂ ಜಟ್ಕಾ ಕಟ್ ವಿವಾದಗಳ ನಡುವೆಯೇ ಪಶುಸಂಗೋಪನಾ ಇಲಾಖೆ ಪ್ರಾಣಿ ವಧೆ ವೇಳೆ ಸ್ಟನ್ನಿಂಗ್ ಕಡ್ಡಾಯ ಆದೇಶ ಹೊರಡಿಸಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೀಗ ಈ ವಿಚಾರವಾಗಿ ಸಚಿವ ಪ್ರಭು ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.
ಹಲಾಲ್ ಕಟ್ ನಿಷೇಧ, ಸ್ಟನ್ನಿಂಗ್ ಕಡ್ಡಾಯದ ಬಗ್ಗೆ ಇಲಾಖೆಗೆ ಪತ್ರ ಬಂದಿದೆ ಅಷ್ಟೇ. ಆದರೆ ಇಲಾಖೆಯಿಂದ ಈವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇನ್ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ ಮಾಡಿ ಪಶುಸಂಗೋಪನಾ ಇಲಾಖೆ ಆದೇಶ ಹೊರಡಿಸಿದೆ ಎಂದು ಹೇಳಲಾಗಿತ್ತು. ಸ್ಟನ್ನಿಂಗ್ ಮೆಥೆಡ್ ನಲ್ಲಿ ಪ್ರಾಣಿಗಳು ನರಳಾಟದಿಂದ ಸಾಯುವುದಿಲ್ಲ ಸ್ಟನ್ನಿಂಗ್ ನಿಂದ ಒಂದೇ ಏಟಿಗೆ ಪ್ರಾಣಿಯ ತಲೆಗೆ ಪೆಟ್ಟು ಬಿದ್ದು ತಕ್ಷಣ ಸಾಯುತ್ತದೆ. ಹಾಗಾಗಿ ಸ್ಟನ್ನಿಂಗ್ ಕಡ್ಡಾಯ ಮಾಡಬೇಕು ಎಂಬುದು ಜಟ್ಕಾ ಕಟ್ ಬೆಂಬಲಿಗರ ಅಭಿಪ್ರಾಯವಾಗಿದೆ.
ಆದರೆ ಸಚಿವ ಪ್ರಭು ಚೌಹಾಣ್, ಪಶುಸಂಗೋಪನಾ ಇಲಾಖೆಯಿಂದ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.