ಬೆಂಗಳೂರು: ಅತಿವೃಷ್ಟಿ ಪರಿಹಾರ ನೀಡುವಲ್ಲಿ ತಮ್ಮ ಕ್ಷೇತ್ರ ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತಿರುವ ಶಾಸಕ ಕುಮಾರಸ್ವಾಮಿ, ಎನ್ ಡಿಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ನಿಧಿ ಪಟ್ಟಿಯಿಂದ ಮೂಡಿಗೆರೆ ಕ್ಷೇತ್ರವನ್ನು ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಅತಿವೃಷ್ಟಿಯಿಂದಾಗಿ ಮೂಡಿಗೆರೆ ಕ್ಷೇತ್ರದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ರೈತರ ಬೆಳೆ, ಸಾವಿರಾರು ಎಕರೆ ಜಮೀನು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆ, ಮಠ ಕಳೆದುಕೊಂಡು ಜನರು ಬೀದಿಗೆ ಬಿದ್ದಿದ್ದಾರೆ. ಇಷ್ಟಾದರೂ ನಮ್ಮ ಕ್ಷೇತ್ರದತ್ತ ಸರ್ಕಾರ ಕಿಂಚಿತ್ತೂ ಗಮನ ಹರಿಸುತ್ತಿಲ್ಲ, ಪರಿಹಾರವನ್ನೂ ನೀಡುತ್ತಿಲ್ಲ. ಈ ವರ್ಷ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಪಟ್ಟಿ ಬಿಡುಗಡೆಯಾಗಿದೆ. ಆದರೆ ಮೂಡಿಗೆರೆ ಕ್ಷೇತ್ರವನ್ನು ಕೈಬಿಡಲಾಗಿದೆ. ಸರ್ಕಾರಕ್ಕೆ ಇಲ್ಲಿನ ಜನರ ಸಂಕಷ್ಟ ಕಾಣುತ್ತಿಲ್ಲವೇ? ಈ ತಾರತಮ್ಯ ನೀತಿ ನ್ಯಾಯವೇ ಎಂದು ಶಾಸಕರು ಪ್ರಶ್ನಿಸಿದ್ದಾರೆ.
ನವಿಲಿಗೆ ಊಟ ಮಾಡಿಸುತ್ತಿರುವ ಮಹಿಳೆಯ ವಿಡಿಯೋ ಶೇರ್ ಮಾಡಿದ ಆನಂದ್ ಮಹಿಂದ್ರಾ
ಶಿವಮೊಗ್ಗ, ಸಾಗರ, ಸೊರಬ ಸೇರಿದಂತೆ ಬೇರೆಲ್ಲ ಕ್ಷೇತ್ರಗಳನ್ನು ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಪರಿಹಾರ ನಿದಿ ಪಟ್ಟಿಗೆ ಸೇರಿಸಲಾಗಿದೆ. ಅತಿ ಹೆಚ್ಚು ಮಳೆಯಾಗುವ ನಮ್ಮ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಕಂದಾಯ ಸಚಿವರಾದವರು ಒಂದು ಮಾನದಂಡ ಇಟ್ಟುಕೊಳ್ಳಬೇಕು. ರಾಜ್ಯದ ಯಾವ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ, ನಷ್ಟವುಂಟಾಗಿದೆ ಎಂಬುದನ್ನು ಗಮನಿಸಿ ಪರಿಹಾರ ನೀಡಬೇಕು ಮೂರ್ನಾಲ್ಕು ವರ್ಷಗಳಿಂದಲೂ ಇದೇ ರೀತಿ ತಾರತಮ್ಯ ಮಾಡಲಾಗಿದೆ ಈಬಾರಿ ಪರಿಹಾರ ನಿದಿ ಪಟ್ಟಿಯಿಂದಲೇ ಕೈಬಿಟ್ಟಿರುವುದು ಬೇಸರ ತಂದಿದೆ ಎಂದು ಸಚಿವ ಆರ್.ಅಶೋಕ್ ವಿರುದ್ಧವೂ ಕಿಡಿಕಾರಿದ್ದಾರೆ.