alex Certify BIG NEWS: ಸಚಿವ ಕಾರಜೋಳ ವರ್ತನೆಗೆ ಸಿದ್ದರಾಮಯ್ಯ ಕೆಂಡಾಮಂಡಲ; MLAಗಳಿಗೆ ಗೌರವ ಇಲ್ವಾ ? ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಚಿವ ಕಾರಜೋಳ ವರ್ತನೆಗೆ ಸಿದ್ದರಾಮಯ್ಯ ಕೆಂಡಾಮಂಡಲ; MLAಗಳಿಗೆ ಗೌರವ ಇಲ್ವಾ ? ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ

ಬೆಳಗಾವಿ: ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಸ್ ವ್ಯವಸ್ಥೆ, ರಸ್ತೆ ಸಮಸ್ಯೆಯಿಂದಾಗಿ ಶಾಲಾ ಮಕ್ಕಳು ಪರದಾಡುತ್ತಿದ್ದಾರೆ. ಸಾರಿಗೆ ಬಸ್ ಸಮಸ್ಯೆ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಮುಗಿಬಿದ್ದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ಆರಂಭವಾಯಿತು.

ಕುಣಿಗಲ್ ಶಾಸಕ ರಂಗನಾಥ್ ಹಾಗೂ ಸಚಿವ ಗೋವಿಂದ ಕಾರಜೋಳ ನಡುವೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಸಿಟ್ಟಿಗೆದ್ದ ಸಚಿವ ಕಾರಜೋಳ ವಿಪಕ್ಷ ಶಾಸಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಅಲ್ಲದೇ ಶಾಸಕ ರಂಗನಾಥ್ ಅವರನ್ನು ಏಯ್ ಆಚೆ ಹೋಗು. ಸದನದಿಂದ ಆಚೆ ಕಳಿಸಿ ಅವನನ್ನು ಎಂದು ರೋಷಾವೇಶ ವ್ಯಕ್ತಪಡಿಸಿದರು. ಸಚಿವರ ವರ್ತನೆಗೆ ಕೆಂಡಾಮಂಡಲರಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರ ವರ್ತನೆ ಸರಿಯಿಲ್ಲ. ಸದನದಲ್ಲಿ ಮೊದಲು ಗೌರವಯುತವಾಗಿ ನಡೆದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.

ಎಂ ಎಲ್ ಎ ಗಳಿಗೆ ಗೌರವ ಇಲ್ವಾ? ನೀವು ಹೇಗೆ ಗೆದ್ದು ಬಂದಿದ್ದೀರಿ. ಹಾಗೇ ಅವರೂ ಕೂಡ ಗೆದ್ದು ಬಂದಿದ್ದಾರೆ. ಶಾಸಕರಿಗೆ ಮಾತನಾಡಲು, ಜನರ ಸಮಸ್ಯೆಯನ್ನು ಹೇಳಲು ಬಿಡದೇ ಏಯ್ ಆಚೆ ಹೋಗು ಎಂದರೆ ಏನರ್ಥ ? ಕಾರಜೋಳ ಅವರೇ ಸಚಿವರಾಗಿ ಈ ರೀತಿ ದಾಳಿ ಮಾಡುವುದು ಸರಿಯಲ್ಲ. ದಬ್ಬಾಳಿಕೆ ನಡೆಸುತ್ತಿದ್ದೀರಾ? ಎಂದು ಕಿಡಿಕಾರಿದರು.

ಸಮಸ್ಯೆ ಹೇಳುತ್ತಿರುವಾಗ ಅದನ್ನು ಆಲಿಸಿ ನ್ಯಾಯ ಕೊಡಬೇಕಾದ ಸ್ಥಾನದಲ್ಲಿರುವವರು, ಸರ್ಕಾರದ ಸಚಿವರು ಈ ರೀತಿ ವರ್ತಿಸಿದರೆ ಏನರ್ಥ? ಮಾತನಾಡುವಾಗ ವೀರಾವೇಶದಿಂದ ಹಾವಭಾವ ವ್ಯಕ್ತಪಡಿಸಿ ಕೂಗಾಡಿದರೆ ಯಾರಿಗಾದರೂ ಬೇಸರವಾಗುತ್ತದೆ. ಸಚಿವ ಮಾಧುಸ್ವಾಮಿಯೂ ಅಷ್ಟೇ ಹೊರಗೆ ಹೋಗಿ ಎಂದು ಹೇಳುತ್ತಿದ್ದೀರಾ? ಪ್ರಜಾಪ್ರಭುತ್ವ ವ್ಯವಸ್ಥೆ ಅಂದ್ರೆ ಇದೇನಾ? ಸದನದ ಒಳಗೆ ಸಚಿವರುಗಳ ಇಂತಹ ನಡೆ ಸರಿಯಲ್ಲ ಎಂದು ಗುಡುಗಿದರು. ಕಾಂಗ್ರೆಸ್ ಸದಸ್ಯರು ಸಚಿವರ ವಿರುದ್ಧ ಗೂಂಡಾ ಮಂತ್ರಿಗಳು ಎಂದು ಘೋಷಣೆ ಕೂಗಿದರು. ವಿಧಾನಸಭೆಯಲ್ಲಿ ಮತ್ತೆ ಗದ್ದಲ-ಕೋಲಾಹಲಕ್ಕೆ ಸಾಕ್ಷಿಯಾದ ಘಟನೆ ನಡೆಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...