ಬೆಂಗಳೂರು: ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಪ್ರತಿಭಟನೆ ನಾಟಕವಾಡುತ್ತಿದ್ದಾರೆ. ಬಿಜೆಪಿ ನಾಯಕರು ಸಂವಿಧಾನಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾಗಿ ಆರೋಪಿಸಿ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಸಿಂದಗಿ ಸಮಾವೇಶದಲ್ಲಿ ಮಾತನಾಡಿದ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕರು ರಾಜಕೀಯ ಪ್ರತಿಭಟನೆ ನಡೆಸಿದ್ದಾರೆ. ಆದರೆ ನಾನು ದಲಿತ ಎಂಬ ಪದವನ್ನೇ ಬಳಕೆ ಮಾಡಿಲ್ಲ. ಸ್ವಾರ್ಥ ಸಾಧನೆಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳಿದ್ದೆ ಎಂದರು.
ಭಿಕ್ಷಾಟನೆ ಮಾಡುತ್ತಿದ್ದಾಕೆಯ ಇಂಗ್ಲೀಷ್ಗೆ ಮನಸೋತ ಅನುಪಮ್ ಖೇರ್ ; ‘ಆರತಿ’ ಬಾಳಿಗೆ ಬೆಳಕಾದ ಹಿರಿಯ ನಟ
ನನ್ನ ಹೇಳಿಕೆಯನ್ನು ತಿರುಚಿ, ಬಿಜೆಪಿ ಬಣ್ಣ ಕಟ್ಟಿ ಪ್ರತಿಭಟನೆ ಮಾಡುತ್ತಿದೆ. ನಾನು ಆರ್ ಎಸ್ ಎಸ್ ವಿರುದ್ಧವಾಗಿರುವುದರಿಂದ ಬಿಜೆಪಿಯವರೇ ಇಂತಹ ಪ್ರತಿಭಟನೆ ಮಾಡಿಸುತ್ತಿದ್ದಾರೆ. ನನ್ನ ಪ್ರಕಾರ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿರುವವರು. ನಾವು ಸಂವಿಧಾನದ ಪರವಾಗಿ ಇರುವವರು ಎಂದು ಹೇಳಿದರು.
ಒಂದು ವೇಳೆ ಸಮಾವೇಶದಲ್ಲಿ ನಾನು ದಲಿತರ ವಿರೋಧವಾಗಿ ಮಾತನಾಡಿದರೆ ಅಲ್ಲಿಯೇ ಜನರು ವಿರೋಧಿಸುತ್ತಿದ್ದರು. ಈಗ ಬಿಜೆಪಿಯವರು ಅನಗತ್ಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ದುರುದ್ದೇಶಪೂರಿತವಾದ ಪ್ರತಿಭಟನೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ನಮ್ಮ ಗುರಿ ಮಿಷನ್ 123 ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ, ಇಂತಹ ಮಿಷನ್ ಗಳನ್ನು ನಾವು ಬೇಕಾದಷ್ಟು ನೋಡಿದ್ದೇವೆ. ಇಂತಹ ಮಿಷನ್ ಗಳು ಸಾಕಷ್ಟು ಬಂದು ಹೋಗಿವೆ. ಹೀಗಾಗಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಬೇಕಿಲ್ಲ ಎಂದು ತಿರುಗೇಟು ನೀಡಿದರು.