ನಗರದಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆ ಮಾಡುವ ಸೇವೆಯನ್ನು ನೀಡುತ್ತಿರುವ ಬಿಬಿಎಂಪಿಯು ಈ ಸೇವೆಗೆ ಬಳಕೆದಾರರಿಂದ ಶುಲ್ಕವನ್ನು ಸಂಗ್ರಹಿಸಲು ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಕೋರಿದೆ. ಹೀಗಾಗಿ ಬಳಕೆದಾರರಿಂದ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಸಂಗ್ರಹಿಸಲು ಬಿಬಿಎಂಪಿಯು ಆಯಾ ಮನೆಗಳ ವಿದ್ಯುತ್ ಬಿಲ್ನ್ನು ಮಾನದಂಡವಾಗಿ ಬಳಕೆ ಮಾಡಲು ಮುಂದಾಗಿದೆ.
ಈ ವಿಚಾರವಾಗಿ ಮಾಹಿತಿ ನೀಡಿದ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತ್ಯಾಜ್ಯ ಸಂಗ್ರಹಣಾ ಸೇವೆಗೆ ಶುಲ್ಕವನ್ನು ವಿಧಿಸಲು ಮಾಸಿಕ ವಿದ್ಯುತ್ ಬಿಲ್ ಸೂಕ್ತವಾದ ಮಾನದಂಡವಾಗಿದೆ. ಮನೆಯವರ ಆದಾಯದ ಮೇಲೆ ಹಾಗೂ ಆಯಾ ಮನೆಯಲ್ಲಿ ವಾಸಿಸುವರ ಸಂಖ್ಯೆಯನ್ನು ಅವಲಂಬಿಸಿ ಬದಲಾಗುತ್ತದೆ. ಹೀಗಾಗಿ ಕಡಿಮೆ ವಿದ್ಯುತ್ ಬಿಲ್ ಪಡೆಯುವವರಿಗೆ ನಾವು 30 ರೂಪಾಯಿ ಸೇವಾ ಶುಲ್ಕ ನಿಗದಿ ಮಾಡಿದ್ದೇವೆ ಎಂದು ಹೇಳಿದರು.
ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಚರ್ಚೆಯ ಸಮಯದಲ್ಲಿ ಈ ಅಂಕಿ ಅಂಶಗಳು ಬದಲಾಗಲೂಬಹುದು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಪ್ರತಿ ತಿಂಗಳು ಬಳಕೆದಾರರ ಶುಲ್ಕ ಸಂಗ್ರಹಿಸಲು ಬೆಸ್ಕಾಂ ಅಧಿಕಾರಿಗಳ ನೆರವು ಪಡೆಯುವುದಾಗಿ ಬಿಬಿಎಂಪಿ ಈ ಹಿಂದೆಯೇ ಬಹಿರಂಗಪಡಿಸಿತ್ತು. ಘನತ್ಯಾಜ್ಯ ನಿರ್ವಹಣೆಗೆ ಸುಮಾರು 800 ಕೋಟಿ ರೂಪಾಯಿ ಖರ್ಚು ಮಾಡುವ ಪೌರಕಾರ್ಮಿಕ ಸಂಸ್ಥೆಯು ವರ್ಷಕ್ಕೆ ಸುಮಾರು 200 ಕೋಟಿಯಿಂದ 300 ಕೋಟಿ ರೂಪಾಯಿ ಗಳಿಸುವ ಭರವಸೆ ಹೊಂದಿದೆ .