alex Certify BIG NEWS: ಮತದಾರರ ಪಟ್ಟಿ ಪರಿಷ್ಕರಣೆ ’KGF’ ಸೇಡಿನ ಕತೆಯೂ ಅಲ್ಲ; ’ಕಾಂತಾರ’ ದಂತಕತೆಯೂ ಅಲ್ಲ; ಸಿಎಂಗೆ ಟಾಂಗ್ ನೀಡಿದ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತದಾರರ ಪಟ್ಟಿ ಪರಿಷ್ಕರಣೆ ’KGF’ ಸೇಡಿನ ಕತೆಯೂ ಅಲ್ಲ; ’ಕಾಂತಾರ’ ದಂತಕತೆಯೂ ಅಲ್ಲ; ಸಿಎಂಗೆ ಟಾಂಗ್ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ವೋಟರ್ ಐಡಿ ಹಗರಣದಲ್ಲಿ ಮುಖ್ಯಮಂತ್ರಿಗಳು 20,000 ರೂಪಾಯಿ ಸಂಬಳದ ಬಡಪಾಯಿ ಏಜೆಂಟನನ್ನು ಬಲಿಪಶು ಮಾಡಿ ತಾವು ಪಾರಾಗುವ ಸಂಚು ನಡೆಸಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ಆಪರೇಷನ್ ವೋಟರ್ ಹಗರಣವನ್ನು ಜಾತಿಗಣತಿಗೆ ಹೋಲಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ

ಆಪರೇಷನ್ ವೋಟರ್ ಹಗರಣವನ್ನು ಹಾಸ್ಯಾಸ್ಪದ ಎಂದು ತಳ್ಳಿಹಾಕಿರುವ ಮುಖ್ಯಮಂತ್ರಿಗಳ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ಹಗರಣದ ರೂವಾರಿಗಳನ್ನು ರಕ್ಷಿಸಲು, ಸಂಸ್ಥೆಯ ಒಬ್ಬ ಏಜೆಂಟನ ವಿರುದ್ಧ ಪೊಲೀಸರಿಂದ ಎಫ್ಐಆರ್ ಹಾಕಿಸಿ ತಮ್ಮ ಸರ್ಕಾರದ ಕೆಲಸ ಎಷ್ಟು ಹಾಸ್ಯಾಸ್ಪದ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಯ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧವೇ ನಾವು ದೂರು ನೀಡಿದ್ದೆವು. ಮುಖ್ಯಮಂತ್ರಿಗಳು 20,000 ರೂಪಾಯಿ ಸಂಬಳದ ಬಡಪಾಯಿ ಏಜೆಂಟನನ್ನು ಬಲಿಪಶು ಮಾಡಿ ತಾವು ಪಾರಾಗುವ ಸಂಚು ನಡೆಸಿದ್ದಾರೆ. ಒಂದು ಸಂಸ್ಥೆಯ ಹಿನ್ನೆಲೆಯನ್ನೂ ಪರಿಶೀಲಿಸದೆ ಮತದಾರರ ಪರಿಷ್ಕರಣೆಗೆ ನೀಡಿರುವ ಅನುಮತಿಗೂ, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಡೆಸಿರುವ ಜಾತಿಗಣತಿಗೂ ಏನು ಸ್ವಾಮಿ ಸಂಬಂಧ?

ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿರುವ ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅದರ ಮಾಲೀಕರು ಯಾರು? ಹಣಕಾಸು ಸಾಮರ್ಥ್ಯ ಏನು? ಉದ್ಯೋಗಿಗಳ ಸಂಖ್ಯೆ ಎಷ್ಟು? ಅದರ ಹಣಕಾಸಿನ ಮೂಲ ಯಾವುದು? ಈ ಬಗ್ಗೆ ತನಿಖೆಯಾಗಲಿ. ದೂರು ಬಂದ ಕಾರಣಕ್ಕೆ ಚಿಲುಮೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿರುವುದನ್ನು ಸ್ವಾಗತಿಸುತ್ತೇನೆ. ಮಾಡಿರುವ ಅಪರಾಧಕ್ಕೆ ಅನುಮತಿ ರದ್ದತಿ ಶಿಕ್ಷೆ ಅಲ್ಲವಲ್ಲಾ? ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅಪರಾಧವನ್ನು ಇಲಾಖೆಯೇ ಒಪ್ಪಿಕೊಂಡಂತಾಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸಮಾಜ ಸೇವೆಗೆ ಬೇಕಾದಷ್ಟು ಅವಕಾಶ ಇರುವಾಗ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ಸಂಸ್ಥೆ ಅರ್ಜಿ ನೀಡಿದಾಗಲೇ ಅದರ ಹಿಂದಿನ ದುರುದ್ದೇಶದ ಅರಿವು ಬಿಬಿಎಂಪಿಗೆ ಆಗಬೇಕಿತ್ತು. ಆಗಿಲ್ಲ ಎಂದರೆ ಬಿಬಿಎಂಪಿ ಹಗರಣದಲ್ಲಿ ಭಾಗಿಯಾಗಿದೆ ಎಂದು ಅರ್ಥ ಅಲ್ಲವೇ? ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಚಿಲುಮೆ ಸಂಸ್ಥೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿದ್ದೀರಿ? ಆ ಸಂಸ್ಥೆ ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಏನಾಯಿತು? ಆ ಸಂಸ್ಥೆ ಬಿಬಿಎಂಪಿಗೆ ಸಲ್ಲಿಸಿದೆಯಾ? ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷಕ್ಕೆ ಮಾರಿದೆಯಾ?

ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು “ಕೆಜಿಎಫ್” ಚಿತ್ರದ ರಾಕಿಭಾಯ್ ನ ಸೇಡಿನ ಕತೆಯೂ ಅಲ್ಲ, “ಕಾಂತಾರ” ಚಿತ್ರದ ಗುಳಿಗ-ಪಂಜುರ್ಲಿಯ ದಂತಕತೆಯೂ ಅಲ್ಲ.

ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು ಎಂದು ತಿರುಗೇಟು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...