ಲಂಡನ್: ಭಾರತೀಯ ಪ್ರಸಿದ್ಧ ಆಧ್ಯಾತ್ಮಿಕ ತಜ್ಞ ಮತ್ತು ಪರಿಸರವಾದಿ ಸದ್ಗುರು, ಯುಕೆಯಿಂದ 100 ದಿನಗಳ 30,000 ಕಿ.ಮೀ ಏಕಾಂಗಿ ಮೋಟಾರ್ ಸೈಕಲ್ ಪ್ರಯಾಣವನ್ನು ಆರಂಭಿಸಿದ್ದಾರೆ.
ಇಶಾ ಫೌಂಡೇಶನ್‌ನ ಸಂಸ್ಥಾಪಕರಾಗಿರುವ ಸದ್ಗುರು, ಭೂಮಿಯ ಮೇಲಿನ ಜೀವಕ್ಕೆ ಅಪಾಯವನ್ನುಂಟುಮಾಡುವ ಮಣ್ಣಿನ ಅವನತಿಯ ಬಗ್ಗೆ ಜಾಗೃತಿ ಮೂಡಿಸಲು ರಸ್ತೆ ಪ್ರವಾಸವನ್ನು ಕೈಗೊಂಡಿದ್ದಾರೆ. ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್ ನಿಂದ ಸದ್ಗುರು ತಮ್ಮ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದಾರೆ. ಪ್ರತಿ ರಾಷ್ಟ್ರದಲ್ಲಿ ಸಕಾರಾತ್ಮಕ ನೀತಿ ಇದ್ದಾಗ ಮಾತ್ರ ಇದಕ್ಕೆ ಪರಿಹಾರ ಸಾಧ್ಯ ಎಂದು ಸದ್ಗುರು ತಿಳಿಸಿದ್ದಾರೆ.
ಯುರೋಪಿನ ಹಲವು ಭಾಗಗಳಲ್ಲಿ ಇನ್ನೂ ಹಿಮ ಬೀಳುತ್ತಿದೆ. ದ್ವಿಚಕ್ರ ವಾಹನದಲ್ಲಿ ರ್ಯಾಲಿ ಆರಂಭಿಸುತ್ತಿರುವುದರಿಂದ ಇದು ಸುಲಭದ ಮಾತಲ್ಲ. ಆದ್ರೂ ತಾನು ಬೈಕ್ ರ್ಯಾಲಿಯನ್ನು ಯಾಕೆ ಮಾಡುತ್ತಿದ್ದೇನೆ ಎಂಬ ಬಗ್ಗೆ ಅವರು ವಿವರಿಸಿದ್ದಾರೆ. ಕಳೆದ 20 ವರ್ಷಗಳಲ್ಲಿ 300,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇದು ಸಂಭವಿಸುತ್ತಿದೆ. ಹೀಗಾಗಿ ಮಣ್ಣಿನ ಸವಕಳಿಯ ಬಗ್ಗೆ ನಾವು ಕಾಳಜಿ ವಹಿಸಬೇಕಾದದ್ದು ಬಹಳ ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಏನಿದು ಮಣ್ಣು ಉಳಿಸಿ ಆಂದೋಲನ?
ಕೃಷಿಯೋಗ್ಯ ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರಗಳು ರಾಷ್ಟ್ರೀಯ ನೀತಿಗಳನ್ನು ಸ್ಥಾಪಿಸಲು ಗಮನಹರಿಸುವ ಸಲುವಾಗಿ ಸದ್ಗುರು ಈ ಆಂದೋಲನಕ್ಕೆ ಮುಂದಾಗಿದ್ದಾರೆ.
ಕ್ರಿಕೆಟ್ ಮೈದಾನದಲ್ಲಾಗಲಿ, ಬದುಕಿನ ಮೈದಾನದಲ್ಲಾಗಲಿ ನಾವು ಚೆನ್ನಾಗಿ ಆಡಬೇಕಾದರೆ ಮಣ್ಣು ಚೆನ್ನಾಗಿರಲೇಬೇಕು. ನಮ್ಮಲ್ಲಿ ಎಷ್ಟೇ ಸಂಪತ್ತು, ವಿದ್ಯೆ, ಹಣವಿದ್ದರೂ ಮಣ್ಣು, ನೀರು ಮರುಸ್ಥಾಪಿಸದಿದ್ದರೆ ನಮ್ಮ ಮಕ್ಕಳು ಚೆನ್ನಾಗಿ ಬದುಕಲು ಸಾಧ್ಯವಾಗದು ಎಂದು ಅವರು ತಿಳಿಸಿದ್ದಾರೆ. ಯುಕೆಯಿಂದ ಆರಂಭವಾದ ಸದ್ಗುರು ಅವರ ಬೈಕ್ ರ್ಯಾಲಿ ದೆಹಲಿಯಲ್ಲಿ ಕೊನೆಗೊಳ್ಳಲಿದೆ.