ಬೆಂಗಳೂರು: ರಫೆಲ್ ಹಗರಣದಿಂದ ಹಿಡಿದು ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆವರೆಗೂ ಬಿಜೆಪಿ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ರಾಜ್ಯ ಕಾಂಗ್ರೆಸ್, ಭ್ರಷ್ಟಾಚಾರ ಎನ್ನುವುದು ಬಿಜೆಪಿಯ ಜಾತಕದಲ್ಲಿಯೇ ಅಡಕವಾಗಿದೆ ಎಂದು ಕಿಡಿಕಾರಿದೆ.
ಮೊದಲಿಂದಲೂ ದೇಶದ ರಕ್ಷಣಾ ವಿಚಾರದಲ್ಲಿ ಹಗರಣ ನಡೆಸಿಕೊಂಡು ಬಂದಿರುವ ಬಿಜೆಪಿ ಶವ ಪೆಟ್ಟಿಗೆಯಿಂದ ಹಿಡಿದು ರಫೆಲ್‌ವರೆಗೂ ಲೂಟಿ ಹೊಡೆದಿದೆ. ರಫೆಲ್ ಹಗರಣ ಎನ್ನುವುದು ಬಿಜೆಪಿಯ ಜೋಳಿಗೆಯೊಳಗಿರುವ ಕೆಂಡದಂತೆ, ಬೆಂಕಿ ಕಾಣದಿದ್ದರೂ ಸುಡುತ್ತಲೇ ಇರುತ್ತದೆ ಎಂದು ಸರಣಿ ಟ್ವೀಟ್ ಮೂಲಕ ಕುಟುಕಿದೆ.
ಬಿಜೆಪಿ ಎಂಬುದು ಭ್ರಷ್ಟ ಜನತಾ ಪಾರ್ಟಿಯಾಗಿದೆ ಸಚಿವರಿಂದ ಹಿಡಿದು ಅವರ ಪಿಎಗಳವರೆಗೂ ಎಲ್ಲರೂ ಡಿಲಿಂಗ್ ಮಾಡುವವರೇ ಆಗಿದ್ದಾರೆ ಎಂದು ಗುಡುಗಿರುವ ಕಾಂಗ್ರೆಸ್, ಮುಖ್ಯಮಂತ್ರಿಗಳ ಗೆಸ್ಟ್‌ಹೌಸ್ ನಲ್ಲಿ ಪ್ರತಿ ದಿನ 100 ಕೋಟಿ ಡೀಲಿಂಗ್ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರೇ ಆರೋಪ ಮಾಡಿದ್ದಾರೆ. ಈಗ, ಐಟಿ, ಇಡಿ, ಸಿಬಿಐ ಸಂಸ್ಥೆಗಳೆಲ್ಲ ದಾಳಿ ಮಾಡುವುದಿಲ್ಲವೇ? ಎಂದು ಪ್ರಶ್ನಿಸಿದೆ.
BIG NEWS: ತಾರಕಕ್ಕೇರಿದ KRS ಕದನ; ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಖುದ್ದು ಭೇಟಿಗೆ ಮುಂದಾದ ಸುಮಲತಾ
10,000 ಹಾಸಿಗೆಯ ಕೋವಿಡ್ ಸೆಂಟರ್ ಹೆಸರಲ್ಲಿ ನೂರಾರು ಕೋಟಿ ನುಂಗಿದ ಬಿಜೆಪಿ ಭರ್ಜರಿ ಪ್ರಚಾರ ಪಡೆದು ಕೋವಿಡ್ ರೋಗಿಗಳ ಚಿಕಿತ್ಸೆಗೆ ಅವಕಾಶ ನೀಡದೆ ಬಾಗಿಲು ಮುಚ್ಚಿದ್ದೇಕೆ? 2ನೇ ಅಲೆಯಲ್ಲಿ ಜನ ಬೆಡ್ ಸಿಗದೆ ನರಳಿದರೂ ಇದರ ಬಗ್ಗೆ ಚಕಾರ ಎತ್ತದಿರುವುದೇಕೆ? ಕರೋನಾ ಎಂದರೆ ಬಿಜೆಪಿಗೆ ಹಬ್ಬ! ಬೆಡ್ ಬ್ಲಾಕಿಂಗ್ ಹಗರಣ, ವ್ಯಾಕ್ಸಿನ್ ಬ್ಲಾಕಿಂಗ್ ಹಗರಣ ನಡೆಸಿ ಹೆಣದ ಮೇಲೂ ಹಣ ಮಾಡಿದೆ ರಾಜ್ಯ ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.
ಇನ್ನು ಮಂತ್ರಿಗಳಲ್ಲದೆ ಅವರ ಅಪ್ತ ಸಹಾಯಕರೂ ಡೀಲಿಂಗ್‌ಗೆ ಇಳಿದಿದ್ದಾರೆ. ಸಚಿವ ಆರ್.ಅಶೋಕ್ ಪಿಎ ಲಂಚದ ಪ್ರಕರಣ ಮುಚ್ಚಿ ಹಾಕಲಾಯ್ತು, ಈಗ, ಸಚಿವ
ಶ್ರೀರಾಮುಲು ಪಿಎ ಡೀಲಿಂಗ್ ಪ್ರಕರಣ ಸಮಾಧಿ ಸೇರುತ್ತಿದೆ! ಹಿಂದೆ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಜಿಲೇಟಿನ್ ಸ್ಪೋಟಗೊಂಡು ಹಲವು ಮಂದಿ ಮೃತಪಟ್ಟಿದ್ದರು. ಬಿಜೆಪಿಗರೇ ಅಕ್ರಮ ಕಲ್ಲು ಕ್ವಾರಿಯಲ್ಲಿ ಬಾಗಿಯಾಗಿದ್ದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ತನಿಖೆ ನಡೆಸುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ದೊಡ್ಡದಾಗಿ ಮಾತಾಡಿದ್ದರು. ಆದರೆ ತನಿಖೆ ಹಳ್ಳ ಹಿಡಿದು ಪ್ರಕರಣಗಳೇ ಮುಚ್ಚಿ ಹೋದವು ಬಿಜೆಪಿ ನಾಯಕರ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.