alex Certify BIG NEWS: ಭಾಷಾಂತಕರನ್ನು ನೋಡುತ್ತಾ ಸುಮ್ಮನೆ ಕೂರಲಾಗದು; ಇದು ಕಾಮನಬಿಲ್ಲಿನ ಕತ್ತು ಕುಯ್ಯುವ ಕೆಲಸ; ಕೇಂದ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಮತ್ತೆ ಕಿಡಿಕಾರಲು ಕಾರಣವೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾಷಾಂತಕರನ್ನು ನೋಡುತ್ತಾ ಸುಮ್ಮನೆ ಕೂರಲಾಗದು; ಇದು ಕಾಮನಬಿಲ್ಲಿನ ಕತ್ತು ಕುಯ್ಯುವ ಕೆಲಸ; ಕೇಂದ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಮತ್ತೆ ಕಿಡಿಕಾರಲು ಕಾರಣವೇನು….?

ಬೆಂಗಳೂರು: ಕನ್ನಡದ ಕಿಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕಾಶವಾಣಿ ಎಫ್ ಎಂ ರೇನ್ ಬೋ ಕನ್ನಡದ ಕಾಮನಬಿಲ್ಲು ರೆಡಿಯೋ ಪ್ರಸಾರ ಸ್ಥಗಿತಗೊಳಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂರ್ಯೋದಯಕ್ಕೆ ಮುನ್ನವೇ ಪ್ರಸಾರ ಆರಂಭಿಸಿ ರಾತ್ರಿ 11ರ ತನಕ ಸತತ 18 ಗಂಟೆಗಳ ಕಾಲ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಿರುವ 101.3 ಎಫ್ ಎಂ ರೇನ್ ಬೋ ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಹೊರಟಿರುವುದು ಅಕ್ಷಮ್ಯ ಎಂದು ಸರಣಿ ಟ್ವೀಟ್ ಮೂಲಕ ಗುಡುಗಿದ್ದಾರೆ.

ರೇನ್ ಬೋ ಕನ್ನಡ ಕಾಮನಬಿಲ್ಲು ಕೇವಲ ರೇಡಿಯೋ ವಾಹಿನಿ ಮಾತ್ರವಲ್ಲ ಕನ್ನಡಿಗರ ಹೃದಯಬಡಿತ, ಕನ್ನಡ ಅಸ್ಮಿತೆ ಕೂಡ ಆಗಿದೆ ಕೇಂದ್ರ ಸರ್ಕಾರ ಕನ್ನಡಿಗರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ. ಅಧಿಕಾರಿಗಳ ಮೂಲಕ ಕನ್ನಡಮ್ಮನ ರಕ್ತ ಬಗೆಯುವ ಹೀನ ಕೆಲಸ ಮಾಡುತ್ತಿದೆ. ಈ ಹಿಂದೆ ಕನ್ನಡಿಗರ ಮನೆಮನದಲ್ಲಿ ತುಂಬಿದ್ದ ಅಮೃತವರ್ಷಿಣಿಯನ್ನು ಮುಗಿಸಲಾಯಿತು. ಈಗ ಕನ್ನಡದ ಕಾಮನಬಿಲ್ಲನ್ನು ಮುಗಿಸಲು ಹೊರಟಿದ್ದಾರೆ. ಕನ್ನಡ ವಿರೋಧಿ ಕೇಂದ್ರ ಸರ್ಕಾರ, ಕನ್ನಡದ್ರೋಹಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕನ್ನಡದ ಆಕ್ರಂದನ ಇನ್ನು ಸಹಿಸಲು ಸಾಧ್ಯವಿಲ್ಲ.

ಕನ್ನಡನಾಡನ್ನು ಉದ್ಧಾರ ಮಾಡುತ್ತೇವೆಂದು ಗೆದ್ದುಹೋದ ಸಂಸದ ಮಹಾಶಯರು ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸುತ್ತಿರುವುದು ಹೊಣೆಗೇಡಿತನವೇ ಸರಿ. ಕನ್ನಡಿಗರು ಸಹಿಷ್ಣುಗಳೆಂದು ತಾಯಿ ಭಾಷೆಗೆ ಕೊಳ್ಳಿ ಇಡುತ್ತಿರುವ ಭಾಷಾಂತಕರನ್ನು ನೋಡುತ್ತಾ ಸುಮ್ಮನೆ ಕೂರಲಾಗದು ಎಂದು ಹೇಳಿದ್ದಾರೆ.

ಎಫ್ ಎಂ ರೇನ್ ಬೋದ ಬಹುತೇಕ ನಿರೂಪಕರು ಅರೆಕಾಲಿಕ ಉದ್ಯೋಗಿಗಳು, ಸ್ಪಷ್ಟ ಕನ್ನಡ, ಅಚ್ಚ ಕನ್ನಡದ ರಾಯಭಾರಿಗಳು. ಅರ್ಥಪೂರ್ಣ ಕಾರ್ಯಕ್ರಮ, ಸುಶ್ರಾವ್ಯ ಹಾಡುಗಳ ಮೂಲಕ ಕೇಳುಗರೊಂದಿಗೆ ಸಂವಾದಿಯಾದವರು. ಈಗ ವಾಹಿನಿಯನ್ನೇ ನಿಲ್ಲಿಸುವ ಒಳಸಂಚು ಇವರೆಲ್ಲರಿಗೂ ಆಗುವ ಅನ್ಯಾಯ, ಕನ್ನಡಿಗರಿಗೆ ಮಾಡುವ ಅಪಚಾರ. ಕನ್ನಡಿಗರಿಗೆ ಕಿರುಕುಳ ನೀಡಿ ವಿಕೃತ ಸಂತೋಷಪಡುವ ಮನಃ ಸ್ಥಿತಿ ಅಳಿಯಲಿ. ಭಾರತ ಒಕ್ಕೂಟ ರಾಜ್ಯಗಳ ಆಗರ ಎನ್ನುವುದು ನೆನಪಿರಲಿ. ಕನ್ನಡ ಹಂತಕರಿಗೆ ಧಿಕ್ಕಾರ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...