ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾದರೂ ಅದರ ಲಾಭ ವಾಹನ ಸವಾರರಿಗೆ ವರ್ಗಾವಣೆಯಾಗುತ್ತಿಲ್ಲ. ಇದರ ಜೊತೆಗೆ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿತ್ತಾದರೂ ಅದನ್ನು ಈಗ ಹಿಂಪಡೆಯಲಾಗಿದೆ.
ಇದೀಗ ಜನಸಾಮಾನ್ಯರಿಗೆ ಮತ್ತೊಂದು ಹೊರೆ ಬೀಳಲಿದೆ. ಸಿಲಿಂಡರ್, ಹಾಲು, ತುಪ್ಪ, ಬೆಣ್ಣೆ, ಎಣ್ಣೆ ಮೊದಲಾದವುಗಳ ಬೆಲೆ ಏರಿಕೆ ಆಗಿರುವುದರಿಂದ ಹೋಟೆಲ್ ತಿನಿಸುಗಳ ಬೆಲೆ ಏರಿಸಲು ಮಾಲೀಕರು ಮುಂದಾಗಿದ್ದಾರೆ. ಈಗಾಗಲೇ ಕೆಲವೊಂದು ಹೋಟೆಲ್ ಗಳಲ್ಲಿ ದರ ಏರಿಕೆ ಮಾಡಲಾಗಿದ್ದು, ಈಗ ಎಲ್ಲರೂ ಇದನ್ನೇ ಅನುಸರಿಸಲು ಮುಂದಾಗಿದ್ದಾರೆ.
ಈ ತಿಂಗಳು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 91.50 ರೂಪಾಯಿ ಕಡಿಮೆ ಮಾಡಲಾಗಿದೆಯಾದರೂ ಅದರ ಹಿಂದಿನ ತಿಂಗಳು ಬರೋಬ್ಬರಿ 350 ರೂಪಾಯಿ ಏರಿಕೆ ಮಾಡಲಾಗಿತ್ತು. ಹಾಗಾಗಿ ಈಗ ಮಾಡಿರುವ ಇಳಿಕೆಯಿಂದ ನಮ್ಮ ಹೊರೆ ಏನು ಕಡಿಮೆಯಾಗುತ್ತಿಲ್ಲ ಎಂಬುದು ಹೋಟೆಲ್ ಮಾಲೀಕರ ಅಳಲಾಗಿದೆ. ಹೋಟೆಲ್ ತಿನಿಸುಗಳ ಬೆಲೆ ಏರಿಕೆಯಿಂದ ಅದನ್ನೇ ಅವಲಂಬಿಸಿರುವವರಿಗೆ ಸಾಕಷ್ಟು ತೊಂದರೆಯಾಗಲಿದೆ.