ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಸೈಕಲ್ ಜಾಥಾ ನಡೆಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಧಿವೇಶನದ ಮೊದಲ ದಿನ ಎತ್ತಿನ ಗಾಡಿ ಚಲೋ ನಡೆಸಿ ಬೆಲೆ ಎರಿಕೆ ಖಂಡಿಸಿದ್ದೆವು. ಆದರೂ ಬೆಲೆ ಇಳಿಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ. ಈ ಬಗ್ಗೆ ಉತ್ತರ ಕೊಡಲು ಸಿದ್ಧವಾಗಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಕ್ಕಿ, ಬೇಳೆ, ತರಕಾರಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿದೆ. ಹೀಗಾದರೆ ಜನಸಾಮಾನ್ಯರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಜನರ ಸಂಕಷ್ಟವನ್ನು ಪರಿಹರಿಸುವುದು ಸರ್ಕಾರದ ಕೆಲಸ. ನಾವಿಂದು ಜನರ ಧ್ವನಿಯಾಗಿ ಅವರ ಪರ ಹೋರಾಡುತ್ತಿದ್ದೇವೆ. ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದರೆ ಬಿಜೆಪಿಯವರು ಯುಪಿಎ ಅವಧಿಯಲ್ಲಿಯೂ ಬೆಲೆ ಏರಿಕೆಯಾಗಿತ್ತು ಎಂದು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಮ್ಮ ಅವಧಿಯಲ್ಲಿ ವಸ್ತುಗಳ ಬೆಲೆ ದುಪ್ಪಟ್ಟಾಗಿರಲಿಲ್ಲ, ಪೆಟ್ರೋಲ್ ದರ ನೂರು ರೂಪಾಯಿಯಾಗಿರಲಿಲ್ಲ ಎಂದು ಹೇಳಿದರು.
ಗಣೇಶನ ಮೂರ್ತಿ ವಿಸರ್ಜಿಸಲು ಹೋಗಿ ಐವರು ಜಲಸಮಾಧಿ..!
ರಾಜ್ಯ ಸರ್ಕಾರ ಸೆಸ್ ನ್ನೂ ಕಡಿಮೆ ಮಾಡುತ್ತಿಲ್ಲ. ಸಬ್ಸಿಡಿ ಕೊಡುವುದನ್ನೂ ನಿಲ್ಲಿಸಿದ್ದಾರೆ. ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುವುದೇ ಬಿಜೆಪಿ ಕೆಲಸವಾಗಿದೆ. ಅಧಿವೇಶನದಲ್ಲಿ ಮಾತ್ರವಲ್ಲ ಅಧಿವೇಶನ ಮುಗಿದ ಬಳಿಕವೂ ಹೋರಾಟ ಮುಂದುವರೆಸುತ್ತೇವೆ ಎಂದು ಗುಡುಗಿದರು.