ಬೆಂಗಳೂರು: ದೇವಾಲಯಗಳನ್ನು ತೆರವುಗೊಳಿಸುತ್ತಿರುವ ಬಿಜೆಪಿ ಸರ್ಕಾರದ ಕ್ರಮಕ್ಕೆ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯವರದ್ದು ಡೋಂಗಿ ಹಿಂದುತ್ವ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಹಿಂದುತ್ವ ಹೇಳುತ್ತಾ, ರಾಮನ ಜಪ ಮಾಡುತ್ತ ಇತ್ತ ದೇವಸ್ಥಾನಗಳನ್ನು ಒಡೆದು ಹಾಕುತ್ತಿದ್ದಾರೆ. ಮುಖ್ಯಕಾರ್ಯದರ್ಶಿ ಪತ್ರದ ಮೇಲೆ ದೇವಸ್ಥಾನಗಳನ್ನು ಒಡೆದುಹಾಕಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಪರ್ಯಾಯ ವ್ಯವಸ್ಥೆಯ ಚರ್ಚೆ ಮಾಡದೇ ದೇವಸ್ಥಾನ ಒಡೆದಿದ್ದಾದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.
ʼಸ್ಪೇನ್ʼ ನಲ್ಲಿ ಹೀಗೊಂದು ವಿಚಿತ್ರ ಟೊಮ್ಯಾಟೋ ಸ್ಪರ್ಧೆ
ಬಿಜೆಪಿಯವರು ಹೇಳುವುದು ಹಿಂದುತ್ವ, ಆದರೆ ಇವರದೇ ಸರ್ಕಾರ ಹಿಂದು ದೇವಾಲಯಗಳನ್ನು ನೆಲಸಮ ಮಾಡುತ್ತಿದೆ. ಮಾತಾಡುವುದು ರಾಮನ ಜಪ…. ರಾಮ ಮಂದಿರ ನಿರ್ಮಾಣ ವಿಚಾರ ಆದರೆ ಇಲ್ಲಿ ದೇವಾಲಯಗಳನ್ನು ಒಡೆದು ಹಾಕುವ ಕೆಲಸ ಮಾಡಲಾಗುತ್ತಿದೆ…. ಸುಪ್ರೀಂ ಕೋರ್ಟ್ ಆದೇಶವಿದ್ದರೆ ಜನರ ಜೊತೆ, ಭಕ್ತರ ಜೊತೆ ಮಾತನಾಡಬೇಕಿತ್ತು. ವಿಷಯಗಳನ್ನು ತಿಳಿಸಿ ಪರ್ಯಾಯವಾಗಿ ಏನು ಮಾಡಬೇಕು ಎಂಬುದನ್ನು ಜನಾಭಿಪ್ರಾಯ ಕೇಳಬೇಕಿತ್ತು. ಹಾಗೆ ಮಾಡದೇ ಇವರ ಮನಸ್ಸಿಗೆ ಬಂದಂತೆ ಏಕಾಏಕಿ ದೇವಾಲಯಗಳನ್ನು ತೆರವು ಮಾಡಿರುವುದು ಬಿಜೆಪಿಗರ ಡೋಂಗಿ ಹಿಂದುತ್ವ ರಾಜಕಾರಣಕ್ಕೆ ಸಾಕ್ಷಿ.
ಹಿಂದುತ್ವವಾದ ಹೇಳುವುದು ಕೇವಲ ವೋಟಿಗಾಗಿ, ರಾಜಕಾರಣಕ್ಕಾಗಿ ಹೊರತು ಬಿಜೆಪಿಯವರಿಗೆ ಹಿಂದುತ್ವದ ಬಗ್ಗೆಯಾಗಲಿ, ದೇವರು, ದೇವಸ್ಥಾನದ ಬಗ್ಗೆಯಾಗಲಿ ಯಾವುದೇ ಗೌರವವಿಲ್ಲ ಎಂಬುದು ಇದರಿಂದ ಸಾಬೀತಾಗುತ್ತಿದೆ. ಇದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಗುಡುಗಿದ್ದಾರೆ.