ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿಯ ಹೋಟೆಲ್ನಲ್ಲಿ ಕೊಲೆಯಾದ ಬಳಿಕ ಈ ಕೊಲೆಗೆ ಸಾಕಷ್ಟು ಆಯಾಮಗಳನ್ನು ನೀಡಲಾಗ್ತಿದೆ. ಚಂದ್ರಶೇಖರ್ ಗುರೂಜಿ ಆಪ್ತರೇ ಈ ಕೊಲೆಯನ್ನು ನಡೆಸಿದ್ದಾರೆ ಎನ್ನುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ತಿಳಿದು ಬಂದಿದೆ.
ಜುಲೈ 2ರಿಂದ ಹುಬ್ಬಳ್ಳಿಯ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಚಂದ್ರಶೇಖರ್ ಗುರೂಜಿ ನಾಳೆ ಹೋಟೆಲ್ನಿಂದ ತೆರಳುವವರಿದ್ದರು. ಈ ವಿಚಾರವನ್ನು ಮೊದಲೇ ತಿಳಿದಿದ್ದ ಆರೋಪಿಗಳಾದ ಮಹಂತೇಶ್ ಶಿರೋಳ್ ಹಾಗೂ ಮಂಜುನಾಥ್ ಇಂದೇ ಹೋಟೆಲ್ಗೆ ತೆರಳಿ ಚಂದ್ರಶೇಖರ್ ಗುರೂಜಿಯನ್ನು ಬರ್ಬರವಾಗಿ ಕೊಲೆಗೈದಿದ್ದಾರೆ.
ಚಂದ್ರಶೇಖರ್ ಗುರೂಜಿ ಸಾವಿನ ಹಿಂದೆ ವನಜಾಕ್ಷಿ ಎಂಬಾಕೆಯ ಪಾತ್ರವಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರ್ತಿದೆ. ಸರಳ ವಾಸ್ತು ಕಂಪನಿಯಲ್ಲಿ 2019ರವರೆಗೆ ಸೇವೆ ಸಲ್ಲಿಸಿದ್ದ ಈಕೆ ಹಾಗೂ ತಮ್ಮ ಆಪ್ತರಾಗಿದ್ದ ಮಹಂತೇಶ್ ಶಿರೋಳ್ಗೆ ಚಂದ್ರಶೇಖರ್ ಗುರೂಜಿಯೇ ಮದುವೆ ಮಾಡಿಸಿದ್ದರು ಎನ್ನಲಾಗಿದೆ. ಅಲ್ಲದೇ ದಂಪತಿಗೆ ಉಳಿದುಕೊಳ್ಳಲು ತಮ್ಮದೇ ಫ್ಲ್ಯಾಟ್ ಕೂಡ ಗುರೂಜಿ ನೀಡಿದ್ದರಂತೆ.
ಚಂದ್ರಶೇಖರ್ ಗುರೂಜಿ ಸಂಸ್ಥೆಗೆ ಕೆಲಸ ಮಾಡುವುದನ್ನು ನಿಲ್ಲಿಸಿದ ಬಳಿಕ ಗುರೂಜಿ ತಮ್ಮ ಫ್ಲ್ಯಾಟ್ ಮರಳಿ ನೀಡಿ ಎಂದು ಕೇಳುತ್ತಿದ್ದರಂತೆ. ಇದಕ್ಕೆ ದ್ವೇಷ ಬೆಳೆಸಿಕೊಂಡಿದ್ದ ಮಹಂತೇಶ್ ಹಾಗೂ ವನಜಾಕ್ಷಿ ದಂಪತಿ ತಮಗೆ ಉಪಕಾರ ಮಾಡಿದ್ದ ಗುರೂಜಿಯ ಸಾವಿಗೆ ಮುಹೂರ್ತವಿಟ್ಟಿದ್ದಾರೆ ಎನ್ನಲಾಗಿದೆ.