ಶಿವಮೊಗ್ಗ: ಮಲೆನಾಡಿನ ತವರು ಶಿವಮೊಗ್ಗದಲ್ಲಿ ಲೋಹದ ಹಕ್ಕಿಗಳ ಕಾರ್ಯಾರಂಭಕ್ಕೆ ದಿನಗಣನೆ ಶುರುವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರಯಾಣಿಕ ವಿಮಾನ ಹಾರಾಟ ಆರಂಭಕ್ಕೂ ಮುನ್ನವೇ ವಿಮಾನ ನಿಲ್ದಾಣಕ್ಕೆ ಆದಾಯ ಹರಿದು ಬಂದಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾರಂಭವಾಗಲಿದೆ. ಜುಲೈ 20ರೊಳಗೆ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಸಚಿವ ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ. ಆಗಸ್ಟ್ 11ರಂದು ಬೆಂಗಳೂರಿನಿಂದ ಬರುವ ಮೊದಲ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ವಿಮಾನ ಹಾರಾಟ ಆರಂಭಕ್ಕೂ ಮೊದಲೇ ಆದಾಯ ಆರಂಭವಾಗಿದೆ. ಚುನಾವಣೆ ವೇಳೆ 12 ಲಕ್ಷ ರೂ. ಆದಾಯ ಬಂದಿದೆ. ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ಉದ್ಘಾಟನೆ ಮಾಡಿದ್ದರು. ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೇ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದ್ದರಿಂದ ಗಣ್ಯರ ಓಡಾಟಕ್ಕೆ ವಿಮಾನ ನಿಲ್ದಾಣ ನೆರವಾಗಿದೆ. ಈ ವೇಳೆ ಶಿವಮೊಗ್ಗ ಏರ್ ಪೋರ್ಟ್ ಗೆ 20 ವಿಮಾನ ಬಂದಿಳಿದಿವೆ. ಇದರಿಂದಾಗಿ 12 ಲಕ್ಷ ರೂ. ಆದಾಯ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.