ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ನಾಡಿನ ಹಲವು ಮಹನೀಯರುಗಳಿಗೆ ಅಪಮಾನವೆಸಗಿದೆ. ಜೊತೆಗೆ ನಾಡು, ನುಡಿಗೂ ನಿರ್ಲಕ್ಷ್ಯ ತೋರಿದ್ದು, ಪಠ್ಯಗಳಲ್ಲಿ ಆರೆಸ್ಸೆಸ್ ವಿಚಾರಧಾರೆಗಳನ್ನು ಸೇರಿಸಿದೆ ಎಂದು ಆರೋಪಿಸಿ ನಾಳೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಮಾನವ ಕುವೆಂಪು ಹೋರಾಟ ಸಮಿತಿಯಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ವರದಿ ತಿರಸ್ಕರಿಸಲು, ರೋಹಿತ್ ಚಕ್ರತೀರ್ಥರನ್ನು ಬಂಧಿಸಲು ಹಾಗೂ ಸಚಿವ ನಾಗೇಶ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಾಳೆ ಬೆಳಗ್ಗೆ 10-30 ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ನಡೆಯಲಿದೆ.
ಈ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಹ ಭಾಗವಹಿಸಲಿದ್ದು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಪಾಲ್ಗೊಳ್ಳಲಿದ್ದಾರೆ. ಇದರ ಮಧ್ಯೆ ತೀರ್ಥಹಳ್ಳಿಯ ಕುಪ್ಪಳ್ಳಿಯಿಂದ ‘ಕುವೆಂಪು ವಿಶ್ವಮಾನವ ರಥ’ ಇಂದು ಬೆಳಿಗ್ಗೆ ಹೊರಟಿದ್ದು ಅರಸೀಕೆರೆ, ತಿಪಟೂರು, ಮಾಯಸಂದ್ರ ಮಾರ್ಗವಾಗಿ ಸಂಜೆ 7 ಗಂಟೆಗೆ ಆದಿಚುಂಚನಗಿರಿ ತಲುಪಲಿದೆ. ಬಳಿಕ ನಾಳೆ ಬೆಳಗ್ಗೆ 8 ಗಂಟೆಗೆ ರಥ ಹೊರಡಲಿದ್ದು ಕುಣಿಗಲ್ ಮಾರ್ಗವಾಗಿ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ.