ಬೆಂಗಳೂರು: ನಟ ದರ್ಶನ್ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್ ಹಾಗೂ ಗ್ಯಾಂಗ್ ಮೈಸೂರಿನ ಹೋಟೆಲ್ ಒಂದರಲ್ಲಿ ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದು, ಆತನ ದೃಷ್ಟಿಯೇ ಮಂಜಾಗಿದೆ ಎಂದು ಹೇಳಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ಇಂದ್ರಜಿತ್ ಲಂಕೇಶ್, ಪ್ರಕರಣವನ್ನು ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದಲಿತ ಸಪ್ಲೈಯರ್ ಮೇಲೆ ನಟ ದರ್ಶನ್ ಹಾಗೂ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಸಪ್ಲೈಯರ್ ಕಣ್ಣಿಗೆ ಏಟಾಗಿದ್ದು, ದೃಷ್ಟಿ ಮಂಜಾಗಿದೆ. ದರ್ಶನ್ ಜೊತೆಗೆ ರಾಕೇಶ್, ಹರ್ಷ ಹಾಗೂ ಪವಿತ್ರಾ ಗೌಡ ಕೂಡ ಇದ್ದರು. ಈ ಬಗ್ಗೆ ಸಾಕ್ಷಾಧಾರಗಳು ನನ್ನ ಬಳಿ ಇದೆ ಎಂದು ಆರೋಪಿಸಿದ್ದಾರೆ.
BIG NEWS: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಸಿಡಿದೆದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್
ಹಲ್ಲೆ ನಡೆದ ಮಾರನೆ ದಿನ ಸಪ್ಲೈಯರ್ ಪತ್ನಿ ಪೊರಕೆ ಹಿಡಿದು ಹೊಡೆಯಲು ಬಂದಿದ್ದಾಳೆ. ಪ್ರಕರಣವನ್ನು ಮೈಸೂರು ಪೊಲೀಸ್ ಠಾಣೆಯಲ್ಲಿಯೇ ಸೆಟಲ್ ಮೆಂಟ್ ಮಾಡಿ ಎಲ್ಲರನ್ನು ಕಳುಹಿಸಲಾಗಿದೆ. ವಂಚನೆ ಪ್ರಕರಣದಲ್ಲಿ ಓರ್ವ ಮಹಿಳೆಯನ್ನು ಬಳಸಿಕೊಂಡರು, ಈಗ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆ ಹಾಗೂ ಸಾಮಾನ್ಯ ಜನರ ಮೇಲೆ ಸೆಲೆಬ್ರಿಟಿಗಳು ಈ ರೀತಿ ದೌರ್ಜನ್ಯಗಳನ್ನು ನಡೆಸುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತು ಸೆಟಲ್ ಮೆಂಟ್ ಮಾಡಿಕೊಳ್ಳುವ ಮಟ್ಟಕ್ಕೆ ಕಾನೂನು ಬಂದಿದೆಯೇ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ಅರುಣಾ ಕುಮಾರಿಯನ್ನು ಬಳಸಿಕೊಂಡು ಅನ್ಯಾಯ ಮಾಡಿದ್ದಾರೆ. ಈಗ ಸಾಮಾನ್ಯ ಸಪ್ಲೈಯರ್ ಮೇಲೂ ಹಲ್ಲೆ ನಡೆಸಿದ್ದಾರೆ. ಎಲ್ಲವನ್ನೂ ಪೊಲೀಸ್ ಠಾಣೆಯಲ್ಲೇ ಸೆಟಲ್ ಮೆಂಟ್ ಮಾಡುತ್ತಿದ್ದಾರೆ. ಬಳಿಕ ಮಾಧ್ಯಮಗಳ ಮುಂದೆ ಕಥೆ ಕಟ್ಟುತ್ತಾರೆ ಎಂದರೆ ಇಂತಹ ಅನ್ಯಾಯಗಳು ನಡೆಯುತ್ತಿದ್ದರೂ ಮೂಕನಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ. ಅದಕ್ಕಾಗಿಯೇ ಗೃಹ ಸಚಿವರನ್ನು ಭೇಟಿಯಾಗಿ ತನಿಖೆಗೆ ಮನವಿ ಮಾಡಿದ್ದೇನೆ ಎಂದರು.
ಈ ನಡುವೆ ದಲಿತ ಸಪ್ಲೈಯರ್ ಮೇಲೆ ಹಲ್ಲೆ ಪ್ರಕರಣವನ್ನು ತನಿಖೆ ನಡೆಸುವಂತೆ ಮೈಸೂರು ಕಮೀಷ್ನರ್ ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆದೇಶ ನೀಡಿದ್ದಾರೆ.