alex Certify BIG NEWS: ದೇಶದಲ್ಲಿ ʼಮಂಕಿಪಾಕ್ಸ್‌ʼ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದಲ್ಲಿ ʼಮಂಕಿಪಾಕ್ಸ್‌ʼ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಮಂಕಿಪಾಕ್ಸ್‌ ಎಂಬ ಮಾರಣಾಂತಿಕ ಕಾಯಿಲೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಆರೋಗ್ಯ ತುರ್ತುಸ್ಥಿತಿಯನ್ನು ನಿರ್ಮಾಣ ಮಾಡ್ತಾ ಇದೆ. ಕೊರೊನಾ ಬೆನ್ನಲ್ಲೇ ಬಂದಿರೋ ಈ ಸೋಂಕು ಈಗಾಗ್ಲೇ ಭಾರತಕ್ಕೂ ಕಾಲಿಟ್ಟಿದೆ. ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವಾಲಯ, ಈ ರೋಗವನ್ನು ತಡೆಗಟ್ಟಲು ನಾವು ಏನು ಮಾಡಬೇಕು ? ಏನು ಮಾಡಬಾರದು ? ಎಂಬ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಂಕಿಪಾಕ್ಸ್ ರೋಗದ ಲಕ್ಷಣಗಳಿದ್ರೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಈಗಾಗ್ಲೇ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಬೇರೆ ದೇಶಗಳಿಂದ ಭಾರತಕ್ಕೆ ಬಂದಿರುವ ಪ್ರಯಾಣಿಕರಲ್ಲೇ ಮಂಕಿಪಾಕ್ಸ್‌ ಸೋಂಕು ಕಾಣಿಸಿಕೊಂಡಿರುವುದರಿಂದ ಈ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲೂ ದುಬೈನಿಂದ ಬಂದವರಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆಯಾಗ್ತಿರೋದು ಆತಂಕ ಮೂಡಿಸಿದೆ.

ಈ ಬಗ್ಗೆ ದುಬೈ ಅಧಿಕಾರಿಗಳಿಗೆ ಸಹ ಕೇಂದ್ರ ಸರ್ಕಾರ ಪತ್ರ ಬರೆದು ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಇದುವರೆಗೆ ಎಂಟು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಮಂಕಿಪಾಕ್ಸ್‌ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಕಿಪಾಕ್ಸ್‌  ಕಾರ್ಯಪಡೆಯನ್ನು ಸಹ ರಚಿಸಿದೆ.

ಮಂಕಿಪಾಕ್ಸ್‌ ತಡೆಗಟ್ಟಲು ನೀವು ಮಾಡಬೇಕಾಗಿರುವುದು ಇಷ್ಟೇ…..

ಸೋಂಕಿತ ರೋಗಿಗಳನ್ನು ಇತರರಿಂದ ಪ್ರತ್ಯೇಕಿಸಿ.

ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.

ಸೋಂಕಿತ ವ್ಯಕ್ತಿಗಳ ಬಳಿ ಇರುವಾಗ, ಮಾಸ್ಕ್ ಮತ್ತು ಬಿಸಾಡಬಹುದಾದ ಹ್ಯಾಂಡ್‌ ಗ್ಲೌಸ್‌ಗಳನ್ನು ಧರಿಸಿ.

ಪರಿಸರ ನೈರ್ಮಲ್ಯಕ್ಕಾಗಿ ಸೋಂಕು ನಿವಾರಕಗಳನ್ನು ಬಳಸಿ.

ಮಂಕಿಪಾಕ್ಸ್‌ನಿಂದ ಬಳಲುತ್ತಿರುವವರೊಂದಿಗೆ ಲೆನಿನ್, ಹಾಸಿಗೆ ಅಥವಾ ಟವೆಲ್‌ಗಳನ್ನು ಹಂಚಿಕೊಳ್ಳಬೇಡಿ.

ಸೋಂಕಿತ ವ್ಯಕ್ತಿಗಳ ಮಣ್ಣಾದ ಲೆನಿನ್ ಅಥವಾ ಲಾಂಡ್ರಿಯನ್ನು ಸೋಂಕಿತರಲ್ಲದ ವ್ಯಕ್ತಿಗಳ ಬಟ್ಟೆಗಳೊಂದಿಗೆ ತೊಳೆಯಬೇಡಿ.

ಈ ಕಾಯಿಲೆಯ ಲಕ್ಷಣಗಳಿದ್ದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಬೇಡಿ.

ತಪ್ಪು ಮಾಹಿತಿ ಕೊಟ್ಟು ಜನರನ್ನು ಗಾಬರಿಗೊಳಿಸಬೇಡಿ.

ಮಂಕಿಪಾಕ್ಸ್ ಎಂದರೇನು ?

ಮಂಕಿಪಾಕ್ಸ್ (MPX) ಎಂಬುದು ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತಹ ರೋಗ ಲಕ್ಷಣಗಳನ್ನು ಹೊಂದಿದೆ. ಮಂಕಿಪಾಕ್ಸ್ ಸಾಮಾನ್ಯವಾಗಿ ಸ್ವಯಂ-ಸೀಮಿತ ರೋಗವಾಗಿದ್ದು, ರೋಗಲಕ್ಷಣಗಳು 2 ರಿಂದ 4 ವಾರಗಳವರೆಗೆ ಇರುತ್ತದೆ. ತೀವ್ರತರವಾದ ಲಕ್ಷಣಗಳು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮಂಕಿಪಾಕ್ಸ್‌ಗೆ ತುತ್ತಾಗಿದ್ದರೆ ಜ್ವರ, ದದ್ದು ಮತ್ತು ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತವೆ.

ಉಸಿರಾಟದ ಹನಿಗಳ ಮೂಲಕ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಸಾಮಾನ್ಯವಾಗಿ ದೀರ್ಘಾವಧಿಯ ನಿಕಟ ಸಂಪರ್ಕವಿದ್ದಾಗ ಮಂಕಿಪಾಕ್ಸ್‌ ಹರಡುವ ಸಾಧ್ಯತೆ ಹೆಚ್ಚು. ಇದು ದೇಹದ ದ್ರವಗಳು ಅಥವಾ ಗಾಯಗಳೊಂದಿಗೆ ನೇರ ಸಂಪರ್ಕದ ಮೂಲಕ ಮತ್ತು ಸೋಂಕಿತ ವ್ಯಕ್ತಿಯ ಕಲುಷಿತ ಬಟ್ಟೆ ಅಥವಾ ಲೆನಿನ್ ಮೂಲಕ ಹರಡಬಹುದು. ಸೋಂಕಿತ ಪ್ರಾಣಿಗಳ ಕಚ್ಚುವಿಕೆ ಅಥವಾ ಗೀರುಗಳಿಂದ ಸಹ ಸೋಂಕು ಹರಡುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...