ತಾಜ್ಮಹಲ್ನಲ್ಲಿ ಹೆಚ್ಚಿನ ಭದ್ರತೆಯ ನಡುವೆಯೂ ನೋ ಫ್ಲೈಯಿಂಗ್ ವಲಯದಲ್ಲಿ ವಿಮಾನವೊಂದು ಹಾರಾಟ ನಡೆಸಿದ ಘಟನೆಯು ಸೋಮವಾರ ಮಧ್ಯಾಹ್ನ ವರದಿಯಾಗಿದೆ. ಈ ಬಗ್ಗೆ ಸಿಐಎಸ್ಎಫ್ ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದೇವೆ ಎಂದು ಎಎಸ್ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್ಕುಮಾರ್ ಪಟೇಲ್ ಹೇಳಿದ್ದಾರೆ.
ತಾಜ್ಮಹಲ್ನ ಒಂದು ಮಿನಾರ್ನ ಮೇಲೆ ವಿಮಾನ ಹಾದು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಈ ಬಗ್ಗೆ ಭದ್ರತಾ ಸಿಬ್ಬಂದಿಯು ವರದಿ ಸಲ್ಲಿಸಿದ ಬಳಿಕವಷ್ಟೇ ನಾವು ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬಹುದು ಎಂದು ರಾಜ್ಕುಮಾರ್ ಪಟೇಲ್ ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನ 2:50 ರ ಸುಮಾರಿಗೆ ವಿಮಾನವೊಂದು ಕಾಣಿಸಿಕೊಂಡಿತ್ತು ಎಂದು ಸಿಐಎಸ್ಎಫ್ ಸಿಬ್ಬಂದಿ ದೃಢಪಡಿಸಿದ್ದರೂ ಸಹ ಅದು ಸ್ಮಾರಕಕ್ಕೆ ಹತ್ತಿರದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ವಿಮಾನ ತಾಜ್ಮಹಲ್ನಿಂದ ಎಷ್ಟು ಎತ್ತರ ಹಾಗೂ ದೂರದಲ್ಲಿತ್ತು ಎಂಬುದನ್ನು ನಿರ್ಣಯಿಸಲು ಸಾಧ್ಯವಿಲ್ಲ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ನ್ನು ವಾಯುಪಡೆಯ ಅಧಿಕಾರಿಗಳು ನಿರ್ವಹಿಸೋದ್ರಿಂದ ಈ ಬಗ್ಗೆ ಅವರಿಂದಲೇ ನಿಖರವಾದ ವರದಿಯನ್ನು ಪಡೆದುಕೊಳ್ಳುತ್ತೇವೆ ಎಂದು ಸಿಐಎಸ್ಎಫ್ ಸಿಬ್ಬಂದಿ ಹೇಳಿದ್ದಾರೆ.