ಬೆಳಗಾವಿ: ಗಡಿ ವಿವಾದದ ಬೆನ್ನಲ್ಲೇ ಜಲ ವಿವಾದ ಸೃಷ್ಟಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂ ನಿಂದ ನೀರು ಬಿಡದಂತೆ ಎನ್ ಸಿಪಿ ಶಾಸಕ ಜಯಂತ್ ಪಾಟೀಲ್ ಹೇಳಿದ್ದಾರೆ. ಡ್ಯಾಂಗಳನ್ನು ಎತ್ತರಿಸುವ ಮೂಲಕ ನೀರು ತಡೆಹಿಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡ್ಯಾಂಗಳನ್ನು ಎತ್ತರ ಮಾಡಲು ಅವರ ತಾತನ ಮನೆಯದ್ದಲ್ಲ, ನ್ಯಾಯಯುತವಾಗಿ ನೀರು ಹಂಚಿಕೆ ಮಾಡಬೇಕು ಎಂದು ಗರಂ ಆದರು.
ನಮಗೆ ಸಿಗಬೇಕಾದ ನೀರು ನ್ಯಾಯಯುತವಾಗಿ ಸಿಕ್ಕಿದೆ. ನೀರು ಹಂಚಿಕೆ ಬಂದ್ ಮಾಡಲು ಯಾರಿಗೂ ಅಧಿಕಾರವಿಲ್ಲ. ಮಹಾರಾಷ್ಟ್ರ ಸರ್ಕಾರ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.