ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಬೇಕೆಂಬ ಕಾರಣಕ್ಕೆ 2016ರ ನವೆಂಬರ್ 8ರಂದು 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ 2000 ಮುಖಬೆಲೆ ನೋಟನ್ನು ಚಲಾವಣೆಗೆ ತಂದಿದ್ದು, ಈಗ ಆ ನೋಟುಗಳನ್ನು ಸಹ ಹಂತ ಹಂತವಾಗಿ ಹಿಂದೆ ಪಡೆಯಲಾಗುತ್ತಿದೆ. 2000 ನೋಟುಗಳು ಲಭ್ಯತೆಯೂ ಕಡಿಮೆಯಾಗಿದೆ.
ಇದರ ಮಧ್ಯೆ ಡಿಜಿಟಲ್ ವಹಿವಾಟಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಯುಪಿಐ, ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮೊದಲಾದವು ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇದೀಗ ಬಹಿರಂಗವಾಗಿರುವ ವಿಷಯವೊಂದು ಅಚ್ಚರಿಗೆ ಕಾರಣವಾಗಿದೆ. ಅಕ್ಟೋಬರ್ 21ರ ವೇಳೆಗೆ ದೇಶದ ಜನರ ಕೈಯಲ್ಲಿ ಚಲಾವಣೆಯಲ್ಲಿರುವ ನಗದು ಹಣದ ಮೊತ್ತ ಬರೋಬ್ಬರಿ 30.88 ಲಕ್ಷ ರೂಪಾಯಿಗಳೆಂದು ಹೇಳಲಾಗಿದೆ.
ಈ ಹಿಂದೆ ನೋಟು ನಿಷೇಧಕ್ಕೂ ಮುನ್ನ ಅಂದರೆ 2016ರ ನವೆಂಬರ್ 4ರಂದು ಚಲಾವಣೆಯಲ್ಲಿದ್ದ ನಗದು ಹಣದ ಮೊತ್ತ 17.70 ಲಕ್ಷ ಕೋಟಿ ರೂಪಾಯಿಗಳು. ಇದೀಗ ಈ ಪ್ರಮಾಣ ಶೇಕಡಾ 71.84 ರಷ್ಟು ಏರಿಕೆಯಾಗಿರುವುದು ಕಂಡು ಬಂದಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ಹೆಚ್ಚಳವಾಗುತ್ತಿದ್ದರು ಸಹ ಜನರು ನಗದು ಚಲಾವಣೆಗೆ ಪ್ರಾಶಸ್ತ್ಯ ನೀಡುತ್ತಿರುವುದು ಇದರಿಂದ ತಿಳಿಯಬಹುದಾಗಿದೆ. ಆದರೆ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಜನ, ಡಿಜಿಟಲ್ ಪಾವತಿಗೆ ಆದ್ಯತೆ ನೀಡಿದ ಕಾರಣ ನಗದು ಹಣ ಚಲಾವಣೆ 7,600 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ ಎಂದು ಆರ್.ಬಿ.ಐ. ಅರ್ಥಶಾಸ್ತ್ರಜ್ಞರೊಬ್ಬರು ಹೇಳಿದ್ದಾರೆ.