2022ರ ಕ್ರಿಕೆಟ್ ಹಬ್ಬ ಐಪಿಎಲ್ ಗಾಗಿ ದಿನಗಣನೆ ಶುರುವಾಗಿದೆ. ಮಾರ್ಚ್ 26 ಕ್ಕೆ ಮೊದಲ ಪಂದ್ಯ ಕೋಲ್ಕತ್ತಾ ಮತ್ತು ಚೆನ್ನೈ ನಡುವೆ ನಡೆಯಲಿದೆ. ಆದ್ರೆ ಐಪಿಎಲ್ ಆರಂಭಕ್ಕೂ ಮೊದಲೇ ಅಭಿಮಾನಿಗಳಿಗೆ ಕಹಿ ಸುದ್ದಿಯಿದೆ.
ಈ ಬಾರಿಯ ಚುಟುಕು ಕ್ರಿಕೆಟ್ ಹಬ್ಬ ಮುಚ್ಚಿದ ಬಾಗಿಲುಗಳ ಮಧ್ಯೆಯೇ ನಡೆಯಲಿದೆ ಅಂತಾ ಹೇಳಲಾಗ್ತಿದೆ. ಮೈದಾನದಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಕಡಿಮೆ ಎನ್ನಲಾಗ್ತಾ ಇದೆ. ಹಾಗಾಗಿ ಪ್ರೇಕ್ಷಕರಿಲ್ಲದೇ ಪಂದ್ಯಾವಳಿ ನಡೆಯಬಹುದು.
ಈ ಹಿಂದೆ ಮಹಾರಾಷ್ಟ್ರ ಸರ್ಕಾರವು ಪಂದ್ಯಾವಳಿಯಲ್ಲಿ ಶೇ.25 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿತ್ತು, ಆದರೆ ಈಗ ಆದೇಶವನ್ನು ಹಿಂಪಡೆಯುವ ಸಾಧ್ಯತೆ ಇದೆ. ಕೋವಿಡ್ ಪ್ರಕರಣಗಳು ಎಲ್ಲಾ ಕಡೆಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು. ಐಪಿಎಲ್ 2022ರ ಬಹುತೇಕ ಪಂದ್ಯಗಳು ಮುಂಬೈ ಮೈದಾನದಲ್ಲಿ ನಡೆಯಲಿವೆ. ಹಾಗಾಗಿ ಅಂತಿಮ ನಿರ್ಧಾರ ಮಹಾರಾಷ್ಟ್ರ ಸರ್ಕಾರದ್ದು.
ಯುರೋಪ್ ರಾಷ್ಟ್ರಗಳು, ದಕ್ಷಿಣ ಕೊರಿಯಾ ಮತ್ತು ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವುದರಿಂದ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರದಿಂದ ಪತ್ರ ಬಂದಿರುವುದಾಗಿ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಆದ್ರೆ ಐಪಿಎಲ್ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಕೊಡುವ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
ಲೀಗ್ ಸುತ್ತಿನಲ್ಲಿ ಒಟ್ಟು 70 ಪಂದ್ಯಗಳನ್ನು ಆಯೋಜಿಸಲಾಗಿದ್ದು, ಈ ಪೈಕಿ ಮುಂಬೈನ ವಾಂಖೆಡೆ ಸ್ಟೇಡಿಯಂ, ಡಿವೈ ಪಾಟೀಲ್ ಮತ್ತು ಬ್ರಬೋರ್ನ್ ಮೈದಾನಗಳಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಇದಲ್ಲದೇ ಪುಣೆಯಲ್ಲಿ 15 ಪಂದ್ಯಗಳು ನಡೆಯಲಿವೆ. ಪ್ರಸಕ್ತ ಋತುವಿನಿಂದ ಟಿ20 ಲೀಗ್ ಪಂದ್ಯಗಳ ಸಂಖ್ಯೆ 60ರಿಂದ 74ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಕರೋನಾದಿಂದಾಗಿ ಐಪಿಎಲ್, ದುಬೈಗೆ ಸ್ಥಳಾಂತರಗೊಂಡಿತ್ತು. ಈ ಬಾರಿಯೂ ಆ ರೀತಿ ಆಗದಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮೊದಲೇ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಿದೆ.