ಉಕ್ರೇನ್ನಲ್ಲಿ ಸಿಲುಕಿರುವ 20 ಸಾವಿರ ಮಂದಿ ಭಾರತೀಯರಲ್ಲಿ ಇದುವರೆಗೆ ಆರು ಸಾವಿರಕ್ಕೂ ಅಧಿಕ ಮಂದಿ ಭಾರತೀಯರನ್ನು ತಾಯ್ನಾಡಿಗೆ ಮರಳಿ ತರಲಾಗಿದೆ, ಹಾಗೂ ಉಳಿದ ಭಾರತೀಯರನ್ನೂ ದೇಶಕ್ಕೆ ಕರೆ ತರಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರುಳೀಧರನ್ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ, ಮುರುಳೀಧನರ್, ಸರಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಾರತೀಯರು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಇವರಲ್ಲಿ ನಾಲ್ಕು ಸಾವಿರ ಮಂದಿ ಫೆಬ್ರವರಿ 24ರ ಒಳಗಾಗಿ ಭಾರತಕ್ಕೆ ಮರಳಿದ್ದಾರೆ. ನಿನ್ನೆಯವರೆಗೆ ಇನ್ನೂ 2 ಸಾವಿರ ಮಂದಿ ಭಾರತೀಯ ಏರ್ ಪೋರ್ಟ್ಗಳಲ್ಲಿ ಬಂದಿಳಿದಿದ್ದಾರೆ. ನಾವು ರೋಮೆನಿಯಾ, ಪೊಲ್ಯಾಂಡ್, ಹಂಗೇರಿ ಹಾಗೂ ಮಾಲ್ಡೋವಾದ ಮೂಲಕ ಭಾರತೀಯರನ್ನು ದೇಶಕ್ಕೆ ಮರಳಿ ತರುವ ಕಾರ್ಯ ಮಾಡ್ತಿದ್ದೇವೆ ಎಂದು ಹೇಳಿದರು.
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರ ಜೊತೆಯಲ್ಲಿ ಮಾತನಾಡಿದ ವಿ. ಮರುಳೀಧರನ್ ಅವರಿಗೆ ಆಪರೇಷನ್ ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ ಶೀಘ್ರದಲ್ಲಿಯೇ ನಿಮ್ಮ ಮಕ್ಕಳನ್ನು ನಿಮ್ಮ ಮಡಿಲಿಗೆ ಸೇರಿಸಲಾಗುತ್ತದೆ ಎಂಬ ಭರವಸೆ ನೀಡಿದರು.