ಭಾರತದಲ್ಲಿ ಇ-ಸ್ಕೂಟರ್ ಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿರುವುದು ದೋಷಪೂರಿತ ಬ್ಯಾಟರಿ, ಮಾಡ್ಯೂಲ್ ಗಳಿಂದ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಇ-ಸ್ಕೂಟರ್ ಗಳಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡು ಸ್ಕೂಟರ್ ಗಳು ಸುಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿವೆ. ಈ ಮಧ್ಯೆ, ಕೇಂದ್ರ ಸರ್ಕಾರ ಈ ಅಗ್ನಿ ಅನಾಹುತಕ್ಕೆ ಕಾರಣಗಳೇನೆಂಬುದನ್ನು ಪತ್ತೆ ಮಾಡಿ ಪರಿಹಾರವಾದ ನಂತರವೇ ಇ-ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಕಳುಹಿಸಬೇಕೆಂದು ವಾಹನ ತಯಾರಕರಿಗೆ ಮೌಖಿಕ ಸಂದೇಶ ರವಾನೆ ಮಾಡಿತ್ತು.
ಅಲ್ಲದೇ, ಈ ಅನಾಹುತಗಳಿಗೆ ಕಾರಣಗಳೇನೆಂಬುದರ ಬಗ್ಗೆ ತನಿಖೆ ನಡೆಸುವಂತೆಯೂ ಸೂಚನೆ ನೀಡಿತ್ತು. ಇದೀಗ ಸ್ವತಂತ್ರ ಸಂಸ್ಥೆಯೊಂದು ತನಿಖೆ ನಡೆಸಿದ್ದು, ಅದರ ಪ್ರಾಥಮಿಕ ವರದಿ ಪ್ರಕಾರ, ಅಗ್ನಿ ಅನಾಹುತಕ್ಕೆ ಇ-ಸ್ಕೂಟರ್ ಗಳಲ್ಲಿ ಬಳಸಲಾಗುತ್ತಿರುವ ಬ್ಯಾಟರಿ ಸೆಲ್ಸ್ ಮತ್ತು ಮಾಡ್ಯೂಲ್ ಗಳಲ್ಲಿನ ದೋಷದಿಂದ ಅನಾಹುತ ಸಂಭವಿಸುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿವೆ.
ಜಪಾನ್ ನ ಸಾಫ್ಟ್ ಬ್ಯಾಂಕ್ ಗ್ರೂಪ್ ಸಹಯೋಗದಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ ಇ-ಸ್ಕೂಟರ್ ಮಾರಾಟ ಮಾಡಿದ ಓಲಾ ಎಲೆಕ್ಟ್ರಿಕ್ ನ ಇ-ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಅನಾಹುತಗಳಾಗಿದ್ದರ ಬಗ್ಗೆ ಮತ್ತು ಇದೇ ರೀತಿಯ ಘಟನೆಗಳು ನಡೆದಿರುವ ಇನ್ನೆರಡು ಪ್ರಮುಖ ಸಂಸ್ಥೆಗಳ ಬಗ್ಗೆ ತನಿಖೆ ನಡೆದಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರಿಯಕರನಿಂದಲೇ ಘೋರ ಕೃತ್ಯ
ಓಲಾ ಪ್ರಕರಣದಲ್ಲಿ, ಇ-ಸ್ಕೂಟರ್ ಗಳಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಸೆಲ್ಸ್ ಮತ್ತು ಬ್ಯಾಟರಿ ನಿರ್ವಹಣೆ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.
ಇ-ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಸ್ಕೂಟರ್ ಗೆ ಬೆಂಕಿ ಹತ್ತಿಕೊಂಡು ಸಾವನ್ನಪ್ಪಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಕಳೆದ ಮಾರ್ಚ್ ನಲ್ಲಿ ಈ ಬಗ್ಗೆ ತನಿಖೆಗೆ ಆದೇಶ ನೀಡಿತ್ತು. ದೇಶದಲ್ಲಿ ಮಾಲಿನ್ಯಕ್ಕೆ ಕಾರಣವಾಗಿರುವ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 2030 ರ ವೇಳೆಗೆ ಶೇ.80 ರಷ್ಟು ಇ-ಬೈಕ್ ಮತ್ತು ಇ-ಸ್ಕೂಟರ್ ಗಳ ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಪ್ರಸ್ತುತ ಒಟ್ಟು ದ್ವಿಚಕ್ರ ವಾಹನಗಳ ಮಾರಾಟದ ಪೈಕಿ ಇ-ಸ್ಕೂಟರ್ ಮಾರಾಟದ ಪ್ರಮಾಣ ಕೇವಲ ಶೇ.2 ರಷ್ಟಿದೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಇ-ಸ್ಕೂಟರ್ ನಲ್ಲಿ ಕಂಡುಬರುತ್ತಿರುವ ಅನಾಹುತಗಳ ಬಗ್ಗೆ ತೀವ್ರ ಕಳವಳ ವ್ಯಕ್ತವಾಗುತ್ತಿದೆ.
ಇನ್ನು ಭಾರತೀಯ ಸ್ಟಾರ್ಟಪ್ ಗಳಾದ ಒಕಿನಾವ ಮತ್ತು ಪ್ಯೂರ್ ಇವಿ ಸ್ಕೂಟರ್ ಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಒಕಿನಾವ ಪ್ರಕರಣದಲ್ಲಿ ಸೆಲ್ಸ್ ಮತ್ತು ಬ್ಯಾಟರಿ ಮಾಡ್ಯೂಲ್ ಗಳಲ್ಲಿ ಸಮಸ್ಯೆ ಕಂಡುಬಂದಿದ್ದರೆ, ಪ್ಯೂರ್ ಇವಿಯಲ್ಲಿ ಬ್ಯಾಟರಿಯಲ್ಲಿ ದೋಷ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.