ಬೆಂಗಳೂರು: ಯುವತಿ ಮೇಲೆ ಆಸಿಡ್ ದಾಳಿ ನಡೆದು ಎರಡು ದಿನಗಳು ಕಳೆದಿದ್ದರೂ ಇನ್ನೂ ಆರೋಪಿ ನಾಗೇಶ್ ಪತ್ತೆಯಾಗಿಲ್ಲ. ಆರೋಪಿ ಪತ್ತೆಗಾಗಿ ಪೊಲೀಸರ 7 ತಂಡ ರಚನೆ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಸಂತ್ರಸ್ತ ಯುವತಿ ಭೇಟಿ ಬಳಿಕ ಮಾತನಾಡಿದ ಕಮಲ್ ಪಂತ್, ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು. 7 ತಂಡಗಳನ್ನು ರಚಿಸಲಾಗಿದ್ದು, ಹೊರ ರಾಜ್ಯಗಳಲ್ಲಿಯೂ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದರು.
ಈ ನಡುವೆ ಆಸಿಡ್ ದಾಳಿ ಆರೋಪಿ ನಾಗೇಶ್ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಆರೋಪಿ ನಾಗೇಶ್ ಪೋಷಕರು ಹಾಗೂ ಅಣ್ಣ ನಾಗೇಂದ್ರ ಬಾಬು ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.