ಕ್ಷೇತ್ರದ ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಸಂದರ್ಭದಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿಗೆ ಹೈಕಮಾಂಡ್ ನಾಯಕರಿಂದ ಸಂದೇಶವೊಂದು ರವಾನೆಯಾಗಿದೆ.
ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷಾ ವರದಿಗಳು ಹೇಳುತ್ತಿವೆಯಾದರೂ ಒಂದು ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೈಕಮಾಂಡ್ ಆತಂಕ ವ್ಯಕ್ತಪಡಿಸಿದೆ.
ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಸವರಾಜ್ ಬೊಮ್ಮಾಯಿಯೊಂದಿಗೆ ಮಾತುಕತೆ ನಡೆಸಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದ್ದರೂ ಕೊನೇ ಕ್ಷಣದಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರ ಕೈತಪ್ಪುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕು. ಶಿವಕುಮಾರ್ ಉದಾಸಿಯವರೊಂದಿಗೆ ಚರ್ಚಿಸಿ, ಅವರಿಂದ ಸ್ಥಳೀಯವಾಗಿ ಪ್ರಚಾರಗಳನ್ನು ನಡೆಸಿ, ಮಠಾಧೀಶರನ್ನು ವಿಶ್ವಾಸಕ್ಕೆ ಪಡೆದು, ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ ಎಂದಿದ್ದಾರೆ.
ಭಾರತಕ್ಕೆ ʼಕ್ರಿಕೆಟ್ʼ ಕಾಲಿಟ್ಟ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
ಬಹಿರಂಗ ಪ್ರಚಾರದ ಕೊನೇ ಹಂತದಲ್ಲಿ ಘಟಾನುಘಟಿ ರಾಜ್ಯ ನಾಯಕರು ಪಾಲ್ಗೊಳ್ಳುವಂತೆ ನೋಡಿಕೊಳ್ಳುವಂತೆ ವರಿಷ್ಠರಿಂದ ಸಂದೇಶ ನೀಡಲಾಗಿದೆ ಎಂದು ಅರುಣ್ ಸಿಂಗ್ ಸೂಚಿಸಿದ್ದಾರೆ.
ಇನ್ನು ಸಿಎಂ ದೆಹಲಿ ಪ್ರವಾಸದ ಬಗ್ಗೆಯೂ ಮಾತನಾಡಿರುವ ಅರುಣ್ ಸಿಂಗ್, ಉಪಚುನಾವಣಾ ಫಲಿತಾಂಶದ ಬಳಿಕ ದೆಹಲಿ ಪ್ರವಾಸ ಕೈಗೊಂಡರೆ ಸಾಕು ಎಂದು ಹೇಳಿದ್ದಾರೆ ಎನ್ನಲಾಗಿದೆ.