ಮುಂಬೈ: ಸೋಮವಾರ ಮಧ್ಯಾಹ್ನ ಮುಂಬೈ ನಿವಾಸಿಗಳು ಶೂನ್ಯ ನೆರಳು ದಿನ ಎಂದು ಕರೆಯಲ್ಪಡುವ ಅಪರೂಪದ ಆಕಾಶ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದಾರೆ.
ಈ ದಿನ, ಸೂರ್ಯನ ಬೆಳಕಿನಿಂದ ಯಾವುದೇ ನೆರಳುಗಳು ರೂಪುಗೊಂಡಿಲ್ಲ. ಮಧ್ಯಾಹ್ನ 12:35ರ ಸುಮಾರಿಗೆ ಹಲವಾರು ನಿಮಿಷಗಳ ಕಾಲ ತಮ್ಮ ನೆರಳುಗಳು ಕಾಣೆಯಾಗಿರುವುದನ್ನು ಮುಂಬೈನ ಜನರು ಗಮನಿಸಿದ್ದಾರೆ. ಮನುಷ್ಯರಷ್ಟೇ ಅಲ್ಲ, ಬಿಸಿಲಿನಲ್ಲಿರುವ ಯಾವುದೇ ವಸ್ತುಗಳಿಂದ ನೆರಳು ಕಂಡು ಬಂದಿಲ್ಲ. ಇದರಿಂದ ಜನರು ಅಚ್ಚರಿಗೊಂಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ನೀವು ಇನ್ನೂ ಗೊಂದಲಕ್ಕೊಳಗಾಗಿದ್ದರೆ, ಅಪರೂಪದ ಘಟನೆಯ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ.
ಸೂರ್ಯನು ನೇರವಾಗಿ ತಲೆಯ ಮೇಲಿರುವಾಗ ನೆರಳುಗಳು ಕಣ್ಮರೆಯಾಗುತ್ತವೆ. ಈ ವಿದ್ಯಮಾನವನ್ನು ವರ್ಷಕ್ಕೆ ಎರಡು ಬಾರಿ ಗಮನಿಸಬಹುದು. ಆದರೆ, ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಇದನ್ನು ಗಮನಿಸಬಹುದಾಗಿದೆ.
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಪಬ್ಲಿಕ್ ಔಟ್ರೀಚ್ & ಎಜುಕೇಶನ್ ಕಮಿಟಿಯ ಪ್ರಕಾರ, +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವೆ ಇರುವ ಸ್ಥಳಗಳು ಶೂನ್ಯ ನೆರಳು ದಿನಕ್ಕೆ ಸಾಕ್ಷಿಯಾಗುತ್ತವೆ. ಘಟನೆಯ ದಿನಾಂಕವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಭೂಮಿಯ ತಿರುಗುವಿಕೆಯ ಅಕ್ಷವು ಕೋನಕ್ಕೆ ಬಾಗಿರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅಕ್ಷದ ಇಳಿಜಾರು ಸೂರ್ಯನ ಸುತ್ತ ಅದರ ಕ್ರಾಂತಿಯ ಸಮತಲಕ್ಕೆ 23.5 ಡಿಗ್ರಿಗಳಷ್ಟು ಇರುತ್ತದೆ.
+23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ, ಸೂರ್ಯನು ನೇರವಾಗಿ ತಲೆಯ ಮೇಲೆ ಬಂದಾಗ ನೆರಳು ಕಾಣಸಿಗುವುದಿಲ್ಲ. ಇದು ಶೂನ್ಯ ನೆರಳು ದಿನದಂದು ವರ್ಷಕ್ಕೆ ಎರಡು ಬಾರಿ ನೆರಳುಗಳು ಕಣ್ಮರೆಯಾಗುವಂತೆ ಮಾಡುತ್ತದೆ.
ಈ ತಿಂಗಳ ಆರಂಭದಲ್ಲಿ, ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿಗಳು 50 ಸೆಕೆಂಡುಗಳ ಕಾಲ ಶೂನ್ಯ ನೆರಳು ದಿನವನ್ನು ವೀಕ್ಷಿಸಿದ್ದಾರೆ. ಈ ಘಟನೆಯು ಮಧ್ಯಾಹ್ನ 12:29 ರಿಂದ 12:30 ರ ನಡುವೆ ನಡೆದಿದ್ದು, ಯಾವುದೇ ವಸ್ತುಗಳಲ್ಲೂ ನೆರಳು ಕಂಡು ಬಂದಿಲ್ಲ.
ಕಳೆದ ವರ್ಷ ಮೇ ತಿಂಗಳ ಕೊನೆಯಲ್ಲಿ, ಒಡಿಶಾದ ಭುವನೇಶ್ವರದಲ್ಲಿ ನಡೆದ ಶೂನ್ಯ ನೆರಳು ದಿನದ ಫೋಟೋಗಳು ವೈರಲ್ ಆಗಿದ್ದವು. 11:43 ರಿಂದ ಆರಂಭಗೊಂಡು ಸುಮಾರು 3 ನಿಮಿಷಗಳ ಕಾಲ ನೆರಳು ಕಂಡುಬಂದಿರಲಿಲ್ಲ.