ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ ಅನೇಕ ವರ್ಷಗಳ ಬಳಿಕ ಟೀಂ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್ ನಿಜವಾಗಿಯೂ ಅಲ್ಲಿ ನಡೆದಿದ್ದು ಏನು ಅನ್ನೋದನ್ನು ಬಾಯ್ಬಿಟ್ಟಿದ್ದಾರೆ.
2013ರಲ್ಲಿ ಶ್ರೀಶಾಂತ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಇಬ್ಬರು ಆಟಗಾರರು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕುವ ಮೂಲಕ ಸುದ್ದಿಯಾಗಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶ್ರೀಶಾಂತ್ ಕೇವಲ 10 ಲಕ್ಷ ರೂಪಾಯಿ ಆಸೆಗಾಗಿ ನಾನು ಇಂತಹ ಕೆಲಸ ಏಕೆ ಮಾಡಲಿ ಎಂದು ಹೇಳಿದ್ದಾರೆ.
ನಾನು ಇರಾನಿ ಟ್ರೋಫಿಯನ್ನು ಆಡಿದ್ದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲು ಕಾತುರನಾಗಿದ್ದೆ. ಸರಣಿಗಳಲ್ಲಿ ಆಡುವುದೇ ನನ್ನ ಗುರಿಯಾಗಿತ್ತು. ಈ ರೀತಿ ಯೋಚನೆ ಮಾಡುವ ನಾನು ಕೇವಲ 10 ಲಕ್ಷ ರೂಪಾಯಿಗಾಗಿ ಇಂತಹ ಕೆಲಸ ಏಕೆ ಮಾಡಲಿ..? ನಾನು ಇದನ್ನೆಲ್ಲ ಹೇಳಬಾರದು. ಆದರೆ ನಾನೊಂದು ಪಾರ್ಟಿಗೆ ಹೋದರೆ 2 ಲಕ್ಷ ರೂಪಾಯಿ ಬಿಲ್ ಆಗುತ್ತದೆ. ಅಂತದ್ರಲ್ಲಿ ಕೇವಲ 10 ಲಕ್ಷಕ್ಕೆ ಈ ಕೆಲಸ ಮಾಡುತ್ತೇನಾ..? ಎಂದು ಹೇಳಿದ್ದಾರೆ.
ಈ ಕಠಿಣ ಪರಿಸ್ಥಿತಿಯಿಂದ ಹೊರಬರಲು ನನಗೆ ಅಭಿಮಾನಿಗಳು ಹಾಗೂ ಆಪ್ತರು ಸಹಾಯ ಮಾಡಿದ್ದಾರೆ. ನಾನು ಅನೇಕರಿಗೆ ಸಹಾಯ ಮಾಡಿದ್ದೇನೆ. ಅವರ ಪ್ರಾರ್ಥನೆಗಳು ನನ್ನನ್ನು ಕಾಯುತ್ತವೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ನಾನು ಸ್ಪಾಟ್ ಫಿಕ್ಸಿಂಗ್ ಬಗ್ಗೆ ಇಷ್ಟೊಂದು ಮಾತನಾಡುತ್ತಿದ್ದೇನೆ.ಅಂದಿನ ಪಂದ್ಯದಲ್ಲಿ 1 ಓವರ್ನಲ್ಲಿ 14ಕ್ಕೂ ಹೆಚ್ಚು ರನ್ ಅವಶ್ಯಕತೆ ಇತ್ತು. ಮೊದಲ ನಾಲ್ಕು ಎಸೆತಗಳಲ್ಲಿ ನಾನು ಕೇವಲ ಐದು ರನ್ಗಳನ್ನು ನೀಡಿದ್ದೆ. ಐಪಿಎಲ್ನಲ್ಲಿ ನಾನು ಯಾವುದೇ ನೋ ಬಾಲ್ ಅಥವಾ ವೈಡ್ಗಳನ್ನು ಎಸೆದಿರಲಿಲ್ಲ. ಇಷ್ಟೇ ಯಾಕೆ ನಾನು ನಿಧಾನಗತಿಯ ಬೌಲಿಂಗ್ ನ್ನು ಮಾಡಿಲ್ಲ. ಕಾಲಿನಲ್ಲಿ 12 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಸಹ ನಾನು 130 ಕಿಲೋಮೀಟರ್ ಪ್ರತಿ ಗಂಟೆ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ